Spread the love

ಶಿವಮೊಗ್ಗ: ನಗರದ ತೇವರ ಚಟ್ನಹಳ್ಳಿಯ ಫೇಸ್ ಕಾಲೇಜು ಆವರಣದಲ್ಲಿರುವ ಜಯಲಕ್ಷ್ಮೀ ಈಶ್ವರಪ್ಪ ಸಭಾಂಗಣದಲ್ಲಿ ನವೆಂಬರ್ 5ರಂದು “ಅನುದಾನಿತ ಪಿಂಚಣಿ ವಂಚಿತ ನೌಕರರ ಬೃಹತ್ ಸಮಾವೇಶ” ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ.ಹನುಮಂತಪ್ಪ ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿರುವ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಪದಾಧಿಕಾರಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣ ಸಚಿವರಿಗೆ ಪಿಂಚಣಿ ವಂಚಿತ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಅವರು ಬೃಹತ್ ಸಮಾವೇಶ ಉದ್ಘಾಟಿಸುವರು. ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸೇರಿದಂತೆ ಶಿಕ್ಷಕರ ಮತ್ತು ಪದವಿಧರ ಕ್ಷೇತ್ರಗಳ ಹಾಲಿ ಮತ್ತು ಮಾಜಿ ವಿಧಾನ ಪರಿಷತ್ತು ಸದಸ್ಯರು, ವಿವಿಧ ವಿಧಾನಸಭೆ ಕ್ಷೇತ್ರಗಳ ಹಾಲಿ ಮತ್ತು ಮಾಜಿ ಶಾಸಕರು, ಸರ್ಕಾರಿ ಮತ್ತು ಅನುದಾನಿತ ಶಾಲೆ ಕಾಲೇಜುಗಳ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಮಾವೇಶದಲ್ಲಿ ಉಪಸ್ಥಿತರಿರಲಿದ್ದಾರೆ ಎಂದರು.

ಅನೇಕ ವರ್ಷಗಳಿಂದ ರಾಜ್ಯದ ಅನುದಾನಿತ ಶಾಲೆ ಕಾಲೇಜುಗಳಲ್ಲಿ 2006 ರ ಪೂರ್ವದಲ್ಲಿ ಮತ್ತು ನಂತರದಲ್ಲಿ ನೇಮಕಾತಿ ಹೊಂದಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ನೌಕರರು ಪಿಂಚಣಿ ಇಲ್ಲದೆ ದುಡಿಯುತ್ತಿದ್ದಾರೆ. ಈಗಾಗಲೇ 3 ಸಾವಿರ ಜನ ನಿವೃತ್ತರಾಗಿ ಸರ್ಕಾರದಿಂದ ಬಿಡಿಗಾಸಿನ ಪರಿಹಾರವಿಲ್ಲದೆ ಅತ್ಯಂತ ಕಷ್ಟದ ಬದುಕು ಸಾಗಿಸುತ್ತಿದ್ದಾರೆ ಎಂದು ತಿಳಿಸಿದರು.

ವಿವಿಧ ಕಾರಣಗಳಿಂದ ಅಕಾಲಿಕವಾಗಿ ನಿಧನರಾದ ಶಿಕ್ಷಕರ ಮತ್ತು ನೌಕರರ ಅವಲಂಬಿತ ಕುಟುಂಬ ವರ್ಗದವರು ಬೀದಿ ಪಾಲಾಗಿದ್ದಾರೆ. ಪಿಂಚಣಿ ಬೇಡಿಕೆ ಮತ್ತು ನಿಶ್ಚಿತ ಪಿಂಚಣಿ ಅನುಷ್ಠಾನ ಮತ್ತು ಅನುದಾನಿತ ನೌಕರರ ಸೇವಾ ನಿಯಂತ್ರಣ ಕಾಯಿದೆ 2014 ರದ್ದುಗೊಳಿಸಲು ಆಗ್ರಹಿಸಿ ಸಂಘಟನೆಯಿಂದ ದಶಕಗಳಿಂದ ಹತ್ತು ಹಲವು ಹೋರಾಟಗಳನ್ನು ಮಾಡಿದ್ದೇವೆ ಎಂದರು.

ಕಳೆದ ವರ್ಷ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ 141 ದಿನಗಳ ಐತಿಹಾಸಿಕ ಹೋರಾಟ ಮಾಡಿದ್ದೇವೆ. ನಿವೃತ್ತಿ ಹೊಂದಿದ ಕೆಲ ಶಿಕ್ಷಕರು ಹೋರಾಟದ ಸಮಯದಲ್ಲಿ ತಮ್ಮ ಜೀವಗಳನ್ನು ಕಳೆದುಕೊಂಡಿದ್ದಾರೆ. ಇಷ್ಟಾದರೂ ಯಾವ ಸರ್ಕಾರಗಳು ಅನುದಾನಿತ ನೌಕರರ ಅಳಲು ಆಲಿಸುವ ಕೆಲಸ ಮಾಡಿಲ್ಲ. ಆದರೆ ಶಿವಮೊಗ್ಗದ ಬೃಹತ್ ಸಮಾವೇಶದಲ್ಲಿ ಪಿಂಚಣಿ ಬೇಡಿಕೆ ಸಂಬಂಧ ಪಿಂಚಣಿ ವಂಚಿತ ನೌಕರರು ಸಚಿವದ್ವಯರಿಂದ ಸಿಹಿ ಸುದ್ದಿಯ ನಿರೀಕ್ಷೆಯಲ್ಲಿದ್ದಾರೆ. ಆದ್ದರಿಂದ ರಾಜ್ಯದ ಎಲ್ಲ ಅನುದಾನಿತ ಪಿಂಚಣಿ ವಂಚಿತ ನೌಕರರು ಶಿವಮೊಗ್ಗದಲ್ಲಿ ನಡೆಯುವ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾಧ್ಯಕ್ಷ ಮೃತ್ಯುಂಜಯ. ಟಿ ಹಿರೇಮಠ, ರಾಜ್ಯ ಕಾರ್ಯದರ್ಶಿ ಶಿವಕುಮಾರ ಎಂ. ಎಲ್., ಡಾ.ಕುಮಾರಸ್ವಾಮಿ, ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಬಿ., ಶಿವಮೊಗ್ಗ ತಾಲೂಕು ಅಧ್ಯಕ್ಷ ರಮೇಶ್ ಎಂ, ಉಪನ್ಯಾಸಕ ಮಂಜುನಾಥ್, ಶಿವಕುಮಾರ್, ರುದ್ರೇಗೌಡ ಮಾರ್ಕಳ್ಳಿ, ಶಾಂತಮ್ಮ, ಸಂತೋಷ, ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *