ಶಿವಮೊಗ್ಗ: ”ಮಾಜಿ ಮುಖ್ಯಮಂತ್ರಿ ಮಕ್ಕಳಿಗೆ ಅಧಿಕಾರ ಕೊಟ್ಟು ಬಿಟ್ಟರೆ ನಾವು ಏನು ಮಾಡಬೇಕು” ಎಂದು ಸಾಗರ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಭಾನುವಾರ ಬಹಿರಂಗವಾಗಿ ಸಚಿವ ಮಧು ಬಂಗಾರಪ್ಪ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
”ಕೇವಲ ಮಾಜಿ ಮುಖ್ಯಮಂತ್ರಿ ಮಕ್ಕಳಿಗೆ ಮಂತ್ರಿ ಮಕ್ಕಳಿಗೆ ಯಾಕೇ ಅಧಿಕಾರ? ನಮಗೂ ಕೋಡಿ. ನಾನೂ ಮೂರು ಸಲ ಶಾಸಕನಾಗಿದ್ದೇನೆ. ಮಧು ಬಂಗಾರಪ್ಪ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ನಮ್ಮನ್ನ ಜಿಲ್ಲಾ ಉಸ್ತುವಾರಿಗಳು ಎಲ್ಲೂ ಕರೆಯುತ್ತಿಲ್ಲ. ನಾನು ಎಲ್ಲಿಗೂ ಹೋಗಲ್ಲ. ಯಾರನ್ನೂ ಇಟ್ಟುಕೊಂಡು ಗೆದ್ದು ಬಂದಿಲ್ಲ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಗೆದ್ದು ಬಂದಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೋ ಇಲ್ವೋ ಗೊತ್ತಿಲ್ಲ. ಬಂದ್ರೆ ಭೀಮಣ್ಣ ನಾಯ್ಕರನ್ನು ಕರ್ಕೊಂಡು ಬರ್ತಾರೆ. ನಮಗೆ ಕರೆಯಲ್ಲ ನಾವು ಹೋಗಲ್ಲ. ನಾನು ಸಾಮಾನ್ಯ ವ್ಯಕ್ತಿ ನನ್ನ ಸಾಮರ್ಥ್ಯ ಕಸಿದುಕೊಳ್ಳುವುದು ಯಾರಿಂದಲೂ ಸಾಧ್ಯವಿಲ್ಲ.ನನ್ನನ್ನು ಗೆಲ್ಲಿಸಿದ್ದು ಮಧು ಬಂಗಾರಪ್ಪ ಅಲ್ಲ. ನಾನು ಒಂಟಿ ಸಲಗ ಅಲ್ಲ.ನನ್ನೊಂದಿಗೆ ಸಿದ್ದರಾಮಯ್ಯ ಇದ್ದಾರೆ, ಡಿ.ಕೆ. ಶಿವಕುಮಾರ್ ಇದ್ದಾರೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ.
”ನನಗೆ ಕಾಂಗ್ರೆಸ್ ಸರ್ಕಾರದ ಮೇಲೆ ಅಸಮಧಾನ ಇಲ್ಲ.ಅವರ್ಯಾರೋ ನಿಂತುಕೊಳ್ತಾರೆ ಅಂದರೆ ನನಗೆ ಗೋತಿಲ್ಲ.ಅವರು ಎಲ್ಲೂ ಓಡಾಲಿಡಲ್ಲ. ರಾಘವೇಂದ್ರ ಅವರನ್ನು ಯಡಿಯೂರಪ್ಪ ನವರನ್ನು ಎದರಿಸಿದ್ದು ಬೇಳೂರು ಮಾತ್ರ. ರಾಜ್ಯ ರಾಜಕಾರಣ ನಿಂತ ನೀರಲ್ಲ, ಅದು ಹರಿಯುವ ನೀರು” ಎಂದರು.
”ಹೆಚ್.ಡಿ ಕುಮಾರಸ್ವಾಮಿಯವರು ಸಹ ಆಪರೇಷನ್ ಕಮಲ ಮಾಡಲು ಹೊರಟಿದ್ದಾರೆ. ಸರಕಾರ ಬಿಳಿಸುವ ತಾಕತ್ತು,ಶಕ್ತಿ ಅವರಿಗಿಲ್ಲ ಎಂದರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ವಿಜಯೇಂದ್ರ ಬಂಡವಾಳ ಹೂಡಿದ್ದರು” ಎಂದು ಆರೋಪಿಸಿದರು.
”ಕಾಂಗ್ರೆಸ್ ಮೂರು ಬಾಗಿಲು ಆದರೆ,ಬಿಜೆಪಿ ಆರು ಬಾಗಿಲು ಆಗಿದೆ.ನಳಿನ್ ಕುಮಾರ್ ಕಟೀಲ್ ಗೆ ಮಾನ ಮರ್ಯಾದೆ ಇದೆಯಾ? ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ಇರಲ್ಲ ಅಂತ ಹೇಳಿದ್ದರು. ಈಗ ಎಲ್ಲಿ ಹೋಗಿದ್ದಾರೆ ನಳಿನ್? ಆಪರೇಷನ್ ಕಮಲ ಬಿಜೆಪಿಯವರ ಹುಚ್ಚು ಕನಸು. ಇವರ ಯೋಗ್ಯತೆಗೆ ಯಡಿಯೂರಪ್ಪನವರ ಸಾರಥ್ಯ ಇದ್ದರೂ ಎಷ್ಟು ಸ್ಥಾನಗೆದ್ದರು? ನಾನು ಚಾಲೆಂಜ್ ಮಾಡುತ್ತೇನೆ, ನಮ್ಮ ಸರಕಾರವನ್ನು ಬಿಳಿಸಲಿ ನೋಡೋಣ” ಎಂದು ಆಕ್ರೋಶದ ನುಡಿಗಳನ್ನಾಡಿದರು.
”ರಾಜ್ಯದಲ್ಲಿ ಐಟಿ ದಾಳಿಗಳು ಕಾಂಗ್ರೆಸ್ ನವರ ಮೇಲೆ ಮಾತ್ರ ನಡೆಯುತ್ತದೆ. ಯಡಿಯೂರಪ್ಪನವರ ಆಪ್ತನ ಮನೆ ಮೇಲೆ ಐಟಿ ದಾಳಿ ಆಗಿತ್ತು. ಆ ಅರವತ್ತು ಕೋಟಿ ಎಲ್ಲಿ ಹೋಯ್ತು? ನನ್ನ ರಕ್ತದಲ್ಲಿ ನಾನು ಬರೆದು ಕೊಡುತ್ತೇನೆ ಇನ್ನೂ ಐದು ವರ್ಷ ಸರಕಾರ ನಮ್ಮದೇ” ಎಂದರು.
”ನಾನು ಬಿಜೆಪಿ ಯಲ್ಲಿ ರೆಬೆಲ್ ಆಗಿ 50 ಶಾಸಕರನ್ನು ಎತ್ತುಕೊಂಡು ಹೋಗಿದ್ದೆ.ಯಡಿಯೂರಪ್ಪ ನವರನ್ನು ಆಟ ಆಡಿಸಿದ್ದು ನೀವು ನೋಡಿದ್ದೀರಾ? ನಿಮಗೆ ಯೋಗ್ಯತೆ ಇದ್ದರೆ ಮೊದಲು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿ” ಎಂದು ಬಿಜೆಪಿಗೆ ಸವಾಲು ಹಾಕಿದರು.