ಬೆಂಗಳೂರು: ರಾಜ್ಯದಲ್ಲಿ ಹುಲಿ ಉಗುರು ವಿಚಾರ ಭಾರಿ ಸದ್ದು ಮಾಡುತ್ತಿದ್ದು ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬಳಿಕ ಹುಲಿ ಉಗುರು ಧರಿಸಿರುವ ಪ್ರಕರಣ ಹೆಚ್ಚಾಗಿದೆ. ಇದೀಗ ಆರ್ಯವರ್ಧನ್ ಗುರೂಜಿಗೂ ಸಂಕಷ್ಟ ಎದುರಾಗಿದೆ.
ಇಂದು ಅರಣ್ಯಾಧಿಕಾರಿಗಳು ಆರ್ಯವರ್ಧನ್ ಗುರೂಜಿ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಹುಲಿ ಉಗುರಿನ ಲಾಕೆಟ್ ಧರಿಸಿದ್ದ ಆರೋಪ ಹಿನ್ನೆಲೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇರುವ ಆರ್ಯವರ್ಧನ್ ಗುರೂಜಿ ಅವರ ನಿವಾಸದ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ದಾಳಿಯ ಸಂದರ್ಭದಲ್ಲಿ ಆರ್ಯವರ್ಧನ್ ಬಳಿ ಇದ್ದಂತ ಪೆಂಡೆಂಟ್ ಅನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಮಾಜಿ ಬಿಗ್ ಬಾಸ್ ಸ್ಪರ್ಧಿ ಆರ್ಯವರ್ಧನ್ ಗುರೂಜಿ ಅವರು, ಬಿಗ್ ಬಾಸ್ ಸ್ಪರ್ಧೆಯ ವೇಳೆಯಲ್ಲಿ ತಮ್ಮ ಕೊರಳಿನಲ್ಲಿ ಹುಲಿ ಉಗುರು ಹೊಂದಿದ್ದ ಲಾಕೆಟ್ ಧರಿಸಿದ್ದ ಪೋಟೋ ವೈರಲ್ ಆಗಿತ್ತು. ಈ ಸಂಬಂಧ ಅವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ದೂರು ದಾಖಲಾಗಿತ್ತು.