Spread the love

ಮೈಸೂರು: ಇಲ್ಲಿನ ಪುರಭವನದ ಆವರಣದಲ್ಲಿ ಶುಕ್ರವಾರ ನಡೆದ ಮಹಿಷ ದಸರಾ ಆಚರಣೆ ವೇಳೆ ಒಕ್ಕಲಿಗ ಸಮುದಾಯದವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ವಿರೋಧಿಸಿ ಒಕ್ಕಲಿಗರ ಸಂಘದ ನೂರಾರು ಕಾರ್ಯಕರ್ತರು ಶನಿವಾರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದರಿಂದ ವಿಚಾರವಾದಿ ಕೆಎಸ್ ಭಗವಾನ್ ಅವರ ಮನೆ ಬಳಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಮೈಸೂರು-ಚಾಮರಾಜನಗರ ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಕೆಎಸ್ ಭಗವಾನ್ ಮನೆ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು, ಅವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಪಕ್ಕಕ್ಕೆ ತಳ್ಳಿ, ಮನೆಯೊಳಗೆ ನುಗ್ಗಲು ಯತ್ನಿಸಿದರು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಮನೆಯೊಳಗೆ ಪ್ರವೇಶಿಸದಂತೆ ತಡೆದರು.

‘ಭಗವಾನ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದರೂ, ಅವರು ಯಾವಾಗಲೂ ತಮ್ಮ ಜನರನ್ನೇ ಗುರಿಯಾಗಿಸಿಕೊಂಡಿದ್ದಾರೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಭಗವಾನ್ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಕ ಮಹೇಶ್ ಚಂದ್ರ ಗುರು ಅವರನ್ನು ಬಂಧಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಸಂಚಾಲಕ ಕೆವಿ ಶ್ರೀಧರ್ ಆಗ್ರಹಿಸಿದ್ದಾರೆ.

 

 

Leave a Reply

Your email address will not be published. Required fields are marked *