Spread the love

ಶಿವಮೊಗ್ಗ: ಹಿಂದೂ ಮುಸ್ಲಿಂ ಕೋಮು ಗಲಭೆಯ ಸೂಕ್ಷ್ಮ ಪ್ರದೇಶವಾದ ಶಿವಮೊಗ್ಗ ನಗರದ ಹೊರವಲಯದ ಶಾಂತಿನಗರದ ರಾಗಿಗುಡ್ಡದಲ್ಲಿ ನಿನ್ನೆ ಭಾನುವಾರ ಈದ್ ಮಿಲಾದ್ ಮೆರವಣಿಗೆ ವೇಳೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ಉದ್ವಿಗ್ನ ಸ್ಥಿತಿಗೆ ತಿರುಗಿದ್ದು ಲಾಠಿ ಚಾರ್ಚ್ ನಡೆದು ಹಲವರು ಗಾಯಗೊಂಡಿದ್ದಾರೆ.

ಶಾಂತಿನಗರ ಜನತೆ ತೀವ್ರ ಆತಂಕ, ಬೇಸರ ವ್ಯಕ್ತಪಡಿಸಿದ್ದು ಇಂತಹ ಘಟನೆಗಳು ನಡೆದರೆ ನಾವು ಜೀವನ ನಡೆಸುವುದು ಹೇಗೆ ಎಂದು ಸ್ಥಳೀಯರು ಶಾಸಕ ಬಿಜೆಪಿಯ ಚನ್ನಬಸಪ್ಪ ಮುಂದೆ ತಮ್ಮ ಅಳಲು, ಅಸಹಾಯಕತೆ ತೋಡಿಕೊಂಡಿದ್ದಾರೆ.

ಶಾಂತಿನಗರದ ಮುಖ್ಯ ರಸ್ತೆಯಲ್ಲಿ ಪೊಲೀಸರಿಂದ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬೈಕ್ ಸವಾರ ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಅಲ್ಲಿ ಪರಿಸ್ಥಿತಿ ಈಗ ಬೂದಿ ಮುಚ್ಚಿದ ಕೆಂಡದಂತಿದೆ.ಘಟನಾ ಸ್ಥಳಕ್ಕೆ ಶಾಸಕ ಚನ್ನಬಸಪ್ಪ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.

ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ ಚನ್ನಬಸಪ್ಪ, ರಾಗಿ ಗುಡ್ಡದಲ್ಲಿ ಈ ರೀತಿಯ ಕಿಡಿಗೇಡಿಗಳ ಕೃತ್ಯ ನಡೆಯುತ್ತಲೇ ಇದೆ. ಇದಕ್ಕೆ ಉರಿ ಗೌಡ, ನಂಜೇಗೌಡ ಹೆಸರು ಬರೆದು ಪ್ರಚೋದನೆ ಮಾಡಲಾಗಿದೆ. ಇಷ್ಟಾದಾರೂ ಶಾಂತಿಯುತವಾಗಿ ಸಾಗುತ್ತಿದ್ದ ಈದ್ ಮಿಲಾದ್ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಈ ಭಾಗದಲ್ಲಿ ಪ್ರಚೋದನಕಾರಿ ಕಟೌಟ್ ಹಾಕಲಾಗುತ್ತಿದೆ. ಉರಿ ಗೌಡ, ನಂಜೇಗೌಡ ಹೆಸರು ಬರೆದು ಪ್ರಚೋದನೆ ಮಾಡಲಾಗಿತ್ತು. ಆದರೆ ಪೊಲೀಸರು ಕಟೌಟ್‌ಗೆ ಬಣ್ಣ ಬಳಿದು ಪರಿಸ್ಥಿತಿ ನಿಯಂತ್ರಣ ಮಾಡಿದ್ದರು. ಹೀಗಿದ್ದರೂ ಸಂಜೆ ಮೆರವಣಿಗೆ ವೇಳೆ ಯಾರು ಕಲ್ಲು ತೂರಾಟ ನಡೆಸಿದರೆಂದು ಮೆರವಣಿಗೆ ಹೋದವರು ವಾಪಸ್ ಬಂದು ಗಲಾಟೆ ಮಾಡಿದ್ದಾರೆ ಎಂದರು.

ಮನೆಗಳ ಕಿಟಕಿ ಗಾಜು ಬೈಕು ಕಾರುಗಳಿಗೆ ಜಖಂ ಆಗಿದೆ. ಈ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಪರಿಸ್ಥಿತಿ ಅವಲೋಕನೆ ಮಾಡಲು ಘಟನಾ ಸ್ಥಳಕ್ಕೆ ಆಗಮಿಸಿದ್ದೇನೆ. ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಜೊತೆ ಮಾತನಾಡಿ ಘಟನೆಯ ಮಾಹಿತಿ ಪಡೆದಿದ್ದೇನೆ. ಈಗಾಗಲೇ ಘಟನಾ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಿ ಪೊಲೀಸರು ಪರಿಸ್ಥಿತಿ ನಿಯಂತ್ರಣ ಮಾಡಿದ್ದಾರೆ ಎಂದು ಚನ್ನಬಸಪ್ಪ ಹೇಳಿದ್ದಾರೆ.

ರಾಗಿಗುಡ್ಡದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಡೆಸಲಾಗಿದೆ. ಇತರ ಭಾಗದ ಕೋಮುಸೌಹಾರ್ಧತೆ ಕದಡದಂತೆ ಎಚ್ಚರವಹಿಸಲಾಗಿದೆ.

Leave a Reply

Your email address will not be published. Required fields are marked *