Spread the love

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ನಾಗಭೂಷಣ್‌ ಕಾರು ಅಪಫಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ರಕ್ತ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ.

ಇಕ್ಕಟ್‌, ಕೌಸಲ್ಯ ಸುಪ್ರಜಾ ರಾಮ ಸಿನಿಮಾ ಖ್ಯಾತಿಯ ನಟ ನಾಗಭೂಷಣ್‌ ಕಾರು ಅಪಘಾತ ಮಾಡಿ ಮಹಿಳೆಯ ಸಾವಿಗೆ ಕಾರಣವಾಗಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊನ್ನೆ ಶನಿವಾರ ತಡರಾತ್ರಿ ಬೆಂಗಳೂರಿನ ಕನಕಪುರ ರಸ್ತೆಯ ಕುಮರಸ್ವಾಮಿ ಲೇಔಟ್‌ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ ಕೆ ಎಸ್ ಲೇ ಔಟ್ ನ ಅಪಾರ್ಟ್ ಮೆಂಟ್ ಬಳಿ ವೇಗವಾಗಿ ಕಾರಿನಲ್ಲಿ ಬಂದು ಕಾರು ಫುಟ್ ಪಾತ್ ಮೇಲೆ ಹರಿಸಿ ದಂಪತಿಗೆ ಗುದ್ದಿ ನಂತರ ವಿದ್ಯುತ್ ಕಂಬಕ್ಕೆ ಹೊಡೆದು ಕಾರು ಮುಂಭಾಗ ನುಜ್ಜುಗುಜ್ಜಾಗಿದೆ.

ಶನಿವಾರ ರಾತ್ರಿ 9.30ರ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದ್ದು, ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ದಂಪತಿಯಲ್ಲಿ ಪತ್ನಿ 48 ವರ್ಷದ ಪ್ರೇಮಾ ತೀವ್ರ ಗಾಯಗೊಂಡು ರಕ್ತ ಸೋರಿಕೆಯಾಗಿ ಆಸ್ಪತ್ರೆಗೆ ಸೇರಿಸುವಾಗ ಮಾರ್ಗ ಮಧ್ಯೆ ಮೃತಪಟ್ಟರೆ, ಪತಿ 58 ವರ್ಷದ ಕೃಷ್ಣ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಾರ ದಕ್ಷಿಣ ಡಿಸಿಪಿ ಶಿವಪ್ರಕಾಶ್‌ ದೇವರಾಜ್‌ ಹೇಳಿಕೆ ನೀಡಿದ್ದಾರೆ.

ಅಪಘಾತದ ನಂತರ ನಟ ನಾಗಭೂಷಣ್ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಶರಣಾಗಿದ್ದಾರೆ. ಅವರು ಮದ್ಯಪಾನ ಮಾಡಿ ಕಾರು ಚಲಾಯಿಸಲಿಲ್ಲ ಎಂದು ಪತ್ತೆಯಾಗಿದ್ದು ವೇಗವಾಗಿ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿದ್ದೇ ಕಾರಣ ಎಂದು ಕಂಡುಬರುತ್ತಿದೆ ಎಂದರು.

ನಾಳೆ ವಿಚಾರಣೆಗೆ ಹಾಜರಾಗಲು ನೊಟೀಸ್: ಕಾರು ಚಾಲಕ ಚಿತ್ರನಟ ನಾಗಭೂಷಣ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಮುಂದಿನ ವಿಚಾರಣೆ ಪ್ರಕ್ರಿಯೆ ನಡೆಯುತ್ತಿದೆ. ನಾಗಭೂಷಣ್ ಅವರನ್ನು ಸ್ಟೇಷನ್ ಬೇಲ್ ನೀಡಿ ಕಳುಸಲಾಗಿದೆ. ಮುಂದಿನ ವಿಚಾರಣೆಗೆ ನಾಳೆ ಹಾಜರಾಗುವಂತೆ ನೊಟೀಸ್ ನೀಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅತಿ ವೇಗ ಅಪಘಾತಕ್ಕೆ ಕಾರಣವಾಗಿದೆ. ರಾತ್ರಿಯೇ ಆಲ್ಕೊಹಾಲ್ ಟೆಸ್ಟಿಂಗ್ ನಡೆಸಿದ್ದು, ಮೀಟರ್‌ನಲ್ಲಿ ಕುಡಿದಿಲ್ಲ ಎಂಬುದು ಪತ್ತೆಯಾಗಿದೆ.

ರಕ್ತ ಪರೀಕ್ಷೆ ಮೀಟರ್‌ನಲ್ಲಿಯೂ ಕುಡಿದಿರಲಿಲ್ಲ ಎಂಬುದು ಪತ್ತೆಯಾಗಿದೆ. ಆಕ್ಸಿಡೆಂಟ್ ಮಾಡಿದ ಬಳಿಕ ಸ್ಥಳೀಯರ ಜೊತೆ ಸೇರಿ ಚಾಲಕ ಅಂದರೆ ನಟ ನಾಗಭೂಷಣ್ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಾರು ಚಲಾಯಿಸಿದ್ದೂ ತಾವೇ ಎಂದು ಹೇಳಿಕೊಂಡಿದ್ದಾರೆ ಎಂದು ಸಂಚಾರ ದಕ್ಷಿಣ ಡಿಸಿಪಿ ಶಿವಪಕ್ರಾಶ್ ದೇವರಾಜ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *