Spread the love

ದಾವಣಗೆರೆ: ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಯಾರೂ ಸಹ ನನ್ನನ್ನು ಕಾಂಗ್ರೆಸ್‌ಗೆ ಕರೆದಿಲ್ಲ. ನಾನು ಕಾಂಗ್ರೆಸ್‌ಗೆ ಹೋಗುವುದೂ ಇಲ್ಲ. ಏಕೆಂದರೆ ನಾನು ಬಿಜೆಪಿಯ ಕಟ್ಟಾಳು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಮನೆಗಳಿಗೆ ಕಾಂಗ್ರೆಸ್‌ ಮುಖಂಡರೇ ಹೋಗುವುದಿಲ್ಲ. ನನ್ನ ವೈಯಕ್ತಿಕ ಕೆಲಸಕ್ಕಾಗಿ ಅವರೆಲ್ಲರನ್ನು ಭೇಟಿ ಮಾಡಿಲ್ಲ. ಕ್ಷೇತ್ರದ ವಿಚಾರಗಳ ಬಗ್ಗೆ ಚರ್ಚಿಸಲು ಹೋಗುತ್ತೇನೆ. ಅವರು ಪ್ರೀತಿಯಿಂದ ಮಾತನಾಡಿಸುತ್ತಾರೆ. ನಾನು ಕೂಡ ಪ್ರೀತಿಯಿಂದಲೇ ಮಾತನಾಡುತ್ತೇನೆ. ಅಂದ ಮಾತ್ರಕ್ಕೆ ಕಾಂಗ್ರೆಸ್‌ ಸೇರಲು ಹೋದಂತಾಗುತ್ತದೆಯೇ, ಅಧಿಕಾರದಲ್ಲಿದ್ದವರ ಮನೆಗೆ ಹೋಗಬಾರದಾ ಎಂದು ಪ್ರಶ್ನಿಸಿದರು.

ನಾನು ಬಕೆಟ್‌ ಹಿಡಿಯುವ ರಾಜಕಾರಣಿ ಅಲ್ಲವೇ ಅಲ್ಲ. ಜೆಪಿ ಕಾಲದಿಂದಲೂ ಹೋರಾಟ ಮಾಡಿಕೊಂಡು ಬಂದವನು. ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ರಾಮಜ್ಯೋತಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದೆ. 1990ರಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರಿದ್ದೇನೆ. ಯಡಿಯೂರಪ್ಪ ನನ್ನನ್ನು ಗುರುತಿಸಿ ಟಿಕೆಟ್‌ ಕೊಡದೆ ಹೋಗಿದ್ದರೆ ರಾಜ್ಯದ ಜನರಿಗೆ ರೇಣುಕಾಚಾರ್ಯ ಯಾರು ಎಂಬುದು ಗೊತ್ತೇ ಆಗುತ್ತಿರಲಿಲ್ಲ.

ಯಡಿಯೂರಪ್ಪ ನನಗೆ ಮಾರ್ಗದರ್ಶಕರು. ಈಚೆಗೆ ಪಕ್ಷಕ್ಕೆ ಬಂದ ಕೆಲವರು ನನ್ನ ಬಗ್ಗೆ ಟೀಕೆ ಮಾಡಿದ್ದಾರೆ. ಅವರಿಗೆ ಈಗ ಉತ್ತರ ಕೊಡುವುದಿಲ್ಲ. ರೇಣುಕಾಚಾರ್ಯ “ನಾಟ್‌ ರೀಚಬಲ್‌’ ಎಂದು ಸಿ.ಟಿ. ರವಿ ಹೇಳಿದ್ದಾರೆ. ನಾನೇನು ಸಣ್ಣ ಮಗು ಅಥವಾ ಲಾಲಿಪಾಪ್‌ ತಿನ್ನುವವನಲ್ಲ. ಕಾಲಾಯ ತಸ್ಮೈ ನಮಃ, ಕಾಲ ಬಂದಾಗ ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌ ಸಹ ನನ್ನ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರನ್ನು ನಾನು ದ್ವೇಷ ಮಾಡಲಿಕ್ಕೆ ಹೋಗುವುದಿಲ್ಲ ಎಂದರು.

Leave a Reply

Your email address will not be published. Required fields are marked *