ಬೆಂಗಳೂರು : ರಾಜ್ಯದಲ್ಲಿ ಹಣಕಾಸು ಖಜಾನೆಗೆ ಹೆಚ್ಚು ತೆರಿಗೆ ಬರುವಂತಾಗಲು ಹೊಸದಾಗಿ ಮದ್ಯ ಮಾರಾಟ ಮಳಿಗೆಗಳ ಲೈಸೆನ್ಸ್ ವಿತರಣೆಗೆ ಅಬಕಾರಿ ಇಲಾಖೆಯಲ್ಲಿ ಪ್ರಸ್ತಾವನೆ ಸಿದ್ಧಗೊಂಡಿದೆ. ಹೆಚ್ಚುವರಿಯಾಗಿ ರಾಜ್ಯದಲ್ಲಿ 389 ಎಂಎಸ್‍ಐಎಲ್ ಮದ್ಯ ಮಾರಾಟ ಮಳಿಗೆ ತೆರೆಯಲು ಅವಕಾಶ ನೀಡುವ ಚಿಂತನೆ ಮಾಡಲಾಗಿದೆ.
3 ಸಾವಿರಕ್ಕಿಂತ ಹೆಚ್ಚನ ಜನಸಂಖ್ಯೆ ಇರುವ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಹೊಸದಾಗಿ ಮದ್ಯ ಮಾರಾಟ ಮಳಿಗೆ ಪರವಾನಗಿ ಹಾಗೂ ಸೂಪರ್ ಮಾರುಕಟ್ಟೆಗಳಲ್ಲೂ ಮದ್ಯ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಪನ್ಮೂಲ ಕ್ರೋಡೀಕರಣಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿಗೆ ಕೈಗೊಳ್ಳಬೇಕಾಗಿರುವ ಕ್ರಮದ ಬಗ್ಗೆಯೂ ಸಭೆ ನಡೆದಿದ್ದು ,ಇನ್ನು ದಶಕಕ್ಕೂ ಹಿಂದೆ ಸ್ಥಗಿತಗೊಂಡಿರುವ ಆರ್.ವಿ.ಬಿ. (ಸ್ವತಂತ್ರ ಬಿಯರ್ ಮಾರಾಟ ಮಳಿಗೆ) ಪರವಾನಗಿಗಳನ್ನು ಪುನರ್ ವಿತರಣೆ ಮಾಡಲು ಅವಕಾಶ ಕೋರಲಾಗಿದೆ.
ಪ್ರಸ್ತುತ ರಾಜ್ಯದಲ್ಲಿ ಒಟ್ಟು 12,593 ವಿವಿಧ ಪರವಾನಗಿಗಳ ಮದ್ಯ ಮಾರಾಟ ಮಳಿಗೆಗಳಿದ್ದು ಇದೀಗ ಹೊಸದಾಗಿ 389 ಎಂಎಸ್‍ಐಎಲ್ (ಸಿಎಲ್-11ಸಿ) ಶಾಪ್ ತೆರೆಯಲು ಅನುಮತಿ ಕೋರಲಾಗಿದೆ.
ಇದರಲ್ಲಿ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ 91, ಬೆಳಗಾವಿ 20, ಕಲಬುರಗಿ 20, ಹೊಸಪೇಟೆ 22, ಮಂಗಳೂರು 51, ಮೈಸೂರು ನಗರದಲ್ಲಿ 43 ಪರವಾನಗಿ ನೀಡಬಹುದು ಎಂದು ಅಬಕಾರಿ ಇಲಾಖೆ ಅಕಾರಿಯೊಬ್ಬರು ತಿಳಿಸಿದ್ದಾರೆ.