ಚೆನ್ನೈ: ದಲಿತ ಮಹಿಳೆ ಉಪಹಾರವನ್ನು ತಯಾರಿಸಿದರೆಂದು ಶಾಲಾ ಮಕ್ಕಳು ಆಹಾರವನ್ನು ಸೇವಿಸಲು ನಿರಾಕರಿಸಿರುವ ಘಟನೆ ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ತಮಿಳುನಾಡಿನ ಕರೂರ್ ಜಿಲ್ಲೆಯ ಶಾಲೆಯೊಂದರಲ್ಲಿ ರಾಜ್ಯ ಸರ್ಕಾರದ ಉಚಿತ ಉಪಹಾರ ಯೋಜನೆಯಡಿಯಲ್ಲಿ ತಯಾರಾದ ಬೆಳಗಿನ ತಿಂಡಿಯನ್ನು 15 ವಿದ್ಯಾರ್ಥಿಗಳು ಸೇವಿಸಲು ನಿರಕಾರಿಸಿದ್ದಾರೆ. ದಲಿತ ಮಹಿಳೆಯೊಬ್ಬರು ಅಡುಗೆ ಮಾಡಿದ್ದರಿಂದ ವಿದ್ಯಾರ್ಥಿಗಳು ಆಹಾರವನ್ನು ಸೇವಿಸಲು ನಿರಾಕರಿಸಿದ್ದಾರೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಮಾಹಿತಿ ತಿಳಿದು ಶಾಲೆಗೆ ಜಿಲ್ಲಾಧಿಕಾರಿ ಟಿ ಪ್ರಭು ಶಂಕರ್ ಭೇಟಿ ನೀಡಿದ್ದಾರೆ. ಪೋಷಕರಿಗೆ ಈ ಬಗ್ಗೆ ಮನವರಿಕೆ ಮಾಡಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸಂಭಾವ್ಯ ಕಾನೂನು ಕ್ರಮದ ಎಚ್ಚರಿಕೆ ನೀಡದ್ದಾರೆ.
ದಲಿತ ಮಹಿಳೆಯಾಗಿರುವ ಸುಮತಿ ಎನ್ನುವವರು ಆಹಾರವನ್ನು ತಯಾರಿಸುತ್ತಿದ್ದಾರೆ. ಅವರು ಅಡುಗೆಯನ್ನು ಮಾಡುವವರೆಗೆ ನಮ್ಮ ಮಕ್ಕಳು ಆಹಾರವನ್ನು ಸೇವಿಸುವುದಿಲ್ಲ. ಶಾಲೆಯವರು ಒತ್ತಾಯಿಸಿದರೆ, ತಮ್ಮ ಮಕ್ಕಳನ್ನು ಶಾಲೆಯಿಂದ ಹೊರಗೆ ಕರೆದೊಯ್ಯಲು ಸಿದ್ಧರಿದ್ದಾರೆ ಎಂದು ಪೋಷಕರು ಜಿಲ್ಲಾಧಿಕಾರಿ ಬಳಿ ಹೇಳಿದ್ದಾರೆ.
ತಮಿಳುನಾಡಿನ ಕರೂರ್ ಜಿಲ್ಲೆಯ ವೇಲನ್ ಚೆಟ್ಟಿಯಾರ್ ಪಂಚಾಯತ್ ಯೂನಿಯನ್ ಶಾಲೆಯಲ್ಲಿ ಓದುತ್ತಿರುವ 30 ವಿದ್ಯಾರ್ಥಿಗಳ ಪೈಕಿ 15 ವಿದ್ಯಾರ್ಥಿಗಳು ಉಪಾಹಾರ ಸೇವಿಸಲು ನಿರಾಕರಿಸಿದ್ದು, ಈ ಕುರಿತು ಜಿಲ್ಲಾಡಳಿತಕ್ಕೆ ದೂರು ನೀಡಲಾಗಿದೆ.
ಯೋಜನಾ ನಿರ್ದೇಶಕ ಶ್ರೀನಿವಾಸನ್ ಅವರು ಕೂಡ ಪೋಷಕರ ಬಳಿ ಮಕ್ಕಳಿಗೆ ಆಹಾರವನ್ನು ಸೇವಿಸಲು ಹೇಳಿ ಎಂದು ಪೋಷಕರಲ್ಲಿ ಮನವಿ ಮಾಡಿದ್ದಾರೆ. ಅದರೆ ಪೋಷಕರು ಅವರ ಮನವಿಗೆ ಸ್ಪಂದಿಸಿಲ್ಲ. 15 ವಿದ್ಯಾರ್ಥಿಗಳಲ್ಲಿ ಇಬ್ಬರು ಮಾತ್ರ ಉಪಹಾರವನ್ನು ಸೇವಿಸುತ್ತಿದ್ದಾರೆ. ಇದರಿಂದ ಈ ಸಮಸ್ಯೆ ಮತ್ತಷ್ಟು ಉಲ್ಬಣಕ್ಕೆ ಕಾರಣವಾಗಿದೆ.
ಸದ್ಯ ಜಿಲ್ಲಾಡಳಿತವು ಈ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿ, ಎಲ್ಲರೂ ಉಪಹಾರವನ್ನು ಸೇವಿಸುವಂತೆ ಹೇಳಿದೆ. ಇದನ್ನು ಕೇಳದವರಿಗೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ.