Spread the love

ಮುಂಬೈ: ಅಕ್ಟೋಬರ್ 5ರಿಂದ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕೂಟಕ್ಕೆ ಭಾರತ ತಂಡವನ್ನು ಅಂತಿಮಗೊಳಿಸಲಾಗಿದೆ. 15 ಜನರ ತಂಡವನ್ನು ಆಯ್ಕೆ ಮಾಡಿದ್ದು, ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.

ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ತಂಡದ ಆಯ್ಕೆ ಬಗ್ಗೆ ಪ್ರಕಟಿಸಿದರು.

ಏಷ್ಯಾ ಕಪ್ ನಲ್ಲಿ ಆಡುತ್ತಿರುವ ತಂಡವೇ ಬಹುತೇಕ ಅಂತಿಮವಾಗಿದೆ. ವಿಶ್ವಕಪ್ ಗೆ 15 ಜನರ ತಂಡ ಪ್ರಕಟಿಸಬೇಕಾದ ಕಾರಣ 17 ಜನರ ಏಷ್ಯಾ ಕಪ್ ತಂಡದಲ್ಲಿದ್ದ ಯುವ ಆಟಗಾರರಾದ ತಿಲಕ್ ವರ್ಮಾ ಮತ್ತು ಕನ್ನಡಿಗ ಪ್ರಸಿಧ್ ಕೃಷ್ಣ ವಿಶ್ವಕಪ್ ಕೂಟಕ್ಕೆ ಸ್ಥಾನ ಪಡೆದಿಲ್ಲ.

ಕನ್ನಡಿಗ ಕೆ.ಎಲ್ ರಾಹುಲ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ. ಕಳೆದ ಐಪಿಎಲ್ ವೇಳೆ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೆಎಲ್ ರಾಹುಲ್ ಹಲವು ತಿಂಗಳ ಚೇತರಿಕೆಯ ಬಳಿಕ ಏಷ್ಯಾ ಕಪ್ ಗೆ ಆಯ್ಕೆಯಾಗಿದ್ದರು. ಆದರೆ ಸರಿಯಾಗಿ ಫಿಟ್ ಆಗದ ಕಾರಣ ಮೊದಲೆರಡು ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ವಿಕೆಟ್ ಕೀಪರ್ ಕೋಟಾದಲ್ಲಿ ಕೆಎಲ್ ರಾಹುಲ್ ಮತ್ತು ಎಡಗೈ ಆಟಗಾರ ಇಶಾನ್ ಕಿಶನ್ ಆಯ್ಕೆಯಾಗಿದ್ದಾರೆ. ಏಷ್ಯಾ ಕಪ್ ಗೆ ಬ್ಯಾಕಪ್ ಆಟಗಾರನಾಗಿದ್ದ ಸಂಜು ಸ್ಯಾಮ್ಸನ್ ರನ್ನು ವಿಶ್ವಕಪ್ ನಿಂದ ಕೈಬಿಡಲಾಗಿದೆ.

ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ರೋಹಿತ್ ಶರ್ಮಾ, ಅನುಭವಿ ವಿರಾಟ್ ಕೊಹ್ಲಿ ಜೊತೆಗೆ ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಆಯ್ಕೆಯಾಗಿದ್ದಾರೆ. ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದ ಹೊರತಾಗಿಯೂ ಸೂರ್ಯ ವಿಶ್ವಕಪ್ ಸ್ಕ್ಯಾಡ್ ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆಲ್ ರೌಂಡರ್ ಗಳಾಗಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ ಮತ್ತು ಅಕ್ಷರ್ ಪಟೇಲ್ ಆಯ್ಕೆಯಾಗಿದ್ದಾರೆ.

ತಂಡದಲ್ಲಿ ಸ್ಪಿನ್ನರ್ ಗಳಾಗಿ ಕುಲದೀಪ್ ಯಾದವ್ ಸ್ಥಾನ ಪಡೆದಿದ್ದಾರೆ. ಉಳಿದಂತೆ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರು ಸ್ಪಿನ್ನರ್ ಗಳಾಗಿದ್ದಾರೆ. ಏಷ್ಯಾಕಪ್ ನಲ್ಲಿ ಸ್ಥಾನ ಪಡೆಯದ ಅನುಭವಿ ಸ್ಪಿನ್ನರ್ ಗಳಾದ ಯುಜುವೇಂದ್ರ ಚಾಹಲ್ ಮತ್ತು ರವಿಚಂದ್ರನ್ ಅಶ್ವಿನ್ ಅವರಿಗೆ ವಿಶ್ವಕಪ್ ಗೂ ಅವಕಾಶ ಸಿಕ್ಕಿಲ್ಲ. ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಇದ್ದಾರೆ.

ವಿಶ್ವಕಪ್ ಗೆ ಭಾರತ ತಂಡ

ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉ.ನಾ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮತ್ತು ಮೊಹಮ್ಮದ್ ಸಿರಾಜ್.

 

Leave a Reply

Your email address will not be published. Required fields are marked *