ಶಿವಮೊಗ್ಗ : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ವಿಮಾನ ಸೇವೆ ವಿದ್ಯುಕ್ತವಾಗಿ ಆರಂಭವಾಗುವ ಮೂಲಕ ಮಲೆನಾಡಿಗರ ಬಹುವರ್ಷದ ಕನಸು ನನಸಾಗಿದೆ. ಬೆಂಗಳೂರು ನಂತರದ ಅತಿ ಉದ್ದದ ರನ್‍ವೇ ಹೊಂದಿರುವ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಪ್ರಾರಂಭವಾಯಿತು. ಇಂದು ಬೆಂಗಳೂರಿನಿಂದ ಮೊದಲ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಜನ ಸಂತಸಪಟ್ಟರು.
ಬೆಳಗ್ಗೆ 9.55ಕ್ಕೆ ಬೆಂಗಳೂರಿನ ಕೆಂಪೇಗೌಡ ಏರ್‍ಫೋರ್ಟ್‍ನಿಂದ ಹೊರಟ ಮೊದಲ ವಿಮಾನ 11.05ಕ್ಕೆ ಶಿವಮೊಗ್ಗದಲ್ಲಿ ಲ್ಯಾಂಡ್ ಆಯಿತು. ಮೊದಲ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವರಾದ ಆರಗ ಜ್ಞಾನೇಂದ್ರ ಹರತಾಳು ಹಾಲಪ್ಪ, ಶಾಸಕರಾದ ಬಿ.ವೈ.ವಿಜಯೇಂದ್ರ, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಅನೇಕ ಮುಖಂಡರು ಪ್ರಯಾಣಿಸಿದರು.
ಬೆಂಗಳೂರಿನಲ್ಲಿ ನೆಲೆಸಿದ ಶಿವಮೊಗ್ಗ ಮೂಲದವರು ತಮ್ಮ ಊರಿಗೆ ವಿಮಾನ ಪ್ರಯಾಣ ಆರಂಭವಾಗಿರುವುದಕ್ಕೆ ಸಹಜವಾಗಿಯೇ ಸಂತಸ ವ್ಯಕ್ತಪಡಿಸಿದರು. ಶಿವಮೊಗ್ಗದ ಸೋಗಾನೆ ಬಳಿ ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆ.27ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದಂದೇ ಲೋಕಾರ್ಪಣೆಗೊಳಿಸಿದ್ದರು. ಯಡಿಯೂರಪ್ಪನವರಿಗೆ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿತ್ತು. ಈಗ ಅವರ ಕನಸು ನನಸಾಗಿದ್ದು, ಅದೇ ಖುಷಿಯಲ್ಲಿ ಮೊದಲ ವಿಮಾನದಲ್ಲಿ ಬಂದಿಳಿದರು.
ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣ ದರ 2699ರೂ. ಇದ್ದು, ಬಹುತೇಕ ಸೀಟುಗಳು ಭರ್ತಿಯಾಗಿರುವುದರಿಂದ ದರದ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ವಿಮಾನಯಾನಕ್ಕೆ ಅನುಮತಿ ಪಡೆದುಕೊಂಡಿರುವ ಇಂಡಿಗೋ ಸಂಸ್ಥೆ ಜು.26ರಿಂದ ಟಿಕೆಟ್ ಬುಕ್ಕಿಂಗ್ ಆರಂಭಿಸಿದ್ದು, ಇದಕ್ಕೆ ಸ್ಪರ್ಧೆ ಏರ್ಪಟ್ಟು 3999ರೂ. ಇದ್ದ ದರ 7300ರೂ. ವರೆಗೆ ಏರಿಕೆಯಾಗಿದೆ.
ಶಿವಮೊಗ್ಗದಿಂದ ತಿರುಪತಿ, ಗೋವಾ, ಹೈದರಾಬಾದ್ ನಗರಗಳಿಗೆ ಉಡಾನ್ ಯೋಜನೆಯಡಿ ವಿಮಾನ ಸೇವೆ ನೀಡಲು ಮೂರು ಏರ್‍ಲೈನ್ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ.
ಶಿವಮೊಗ್ಗದ ಸೋಗಾನೆಯಲ್ಲಿರುವ ಈ ವಿಮಾನ ನಿಲ್ದಾಣ ಮಲೆನಾಡಿನ ಏಕೈಕ ವಿಮಾನ ನಿಲ್ದಾಣವಾಗಿದ್ದು, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಕರಾವಳಿ ಭಾಗಕ್ಕೂ ಅನುಕೂಲವಾಗಲಿದೆ.
ಶಿವಮೊಗ್ಗಕ್ಕೆ ಆಗಮಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಶಿವಮೊಗ್ಗದಲ್ಲಿ ಏರ್‍ಫೋರ್ಟ್ ಆಗಲು ಪ್ರಮುಖ. ರೈತರು ಯಾವುದೇ ತಕರಾರಿಲ್ಲದೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಮೀನು ಕೊಟ್ಟ ರೈತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನ್ನ ಜತೆಯಲ್ಲಿ ಹಲವು ರೈತರನ್ನು ಕೂಡ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ ಅವರು, ಒಳ್ಳೆಯ ಕೆಲಸ ಮಾಡಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.