Spread the love

ನವದೆಹಲಿ: ಪ್ರಯಾಣದ ನಡುವೆಯೇ ಕೆಲವು ಪ್ರಯಾಣಿಕರಿಗೆ ನಮಾಜ್‌ ಮಾಡುವ ನಿಟ್ಟಿನಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ ಅನ್ನು ನಿಲ್ಲಿಸಿದ್ದ ಹಿನ್ನೆಲೆಯಲ್ಲಿ ಕಂಡಕ್ಟರ್‌ ನನ್ನು ಕರ್ತವ್ಯದಿಂದ ಅಮಾನತುಗೊಳಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಈ ಬೆಳವಣಿಗೆ ನಂತರ ಬಸ್‌ ಕಂಡಕ್ಟರ್‌ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬರೇಲಿ-ದೆಹಲಿ ಜನರಥ್‌ ಬಸ್‌ ಅನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಕರು ನಮಾಜ್‌ ಮಾಡುವ ನಿಟ್ಟಿನಲ್ಲಿ ನಿಲ್ಲಿಸಿದ್ದರಿಂದ ಜೂನ್‌ ನಲ್ಲಿ ಕಂಡಕ್ಟರ್‌ ಮೋಹಿತ್‌ ಯಾದವ್‌ ಅವರ ಗುತ್ತಿಗೆ ಕರಾರನ್ನು ರದ್ದುಪಡಿಸಲಾಗಿತ್ತು. ಇದರ ಪರಿಣಾಮ ಮೋಹಿತ್‌ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದದ್ದು, ಸೋಮವಾರ ಮೈನ್‌ ಪುರಿಯಲ್ಲಿ ಚಲಿಸುತ್ತಿದ್ದ ರೈಲಿನ ಮುಂಭಾಗಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೋಹಿತ್‌ ಯಾದವ್‌ ಕಾಂಟ್ರಾಕ್ಟ್‌ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತಿಂಗಳಿಗೆ 17,000 ಸಾವಿರ ರೂಪಾಯಿ ಆದಾಯ ಬರುತ್ತಿದ್ದು, ಆತನ ಸಂಬಳದಲ್ಲಿ ಎಂಟು ಮಂದಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಮೋಹಿತ್‌ ನನ್ನು ಬಸ್‌ ಕಂಡಕ್ಟರ್‌ ಕೆಲಸದಿಂದ ವಜಾಗೊಳಿಸಿದ ನಂತರ ಹಲವು ಕಡೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಕೂಡಾ ಕೆಲಸ ಸಿಕ್ಕಿರಲಿಲ್ಲವಾಗಿತ್ತು ಎಂದು ವರದಿ ವಿವರಿಸಿದೆ.

ಉತ್ತರಪ್ರದೇಶ ಸರ್ಕಾರ ನನ್ನ ಪತಿಯ ಅಹವಾಲನ್ನು ಕೇಳಿಸಿಕೊಳ್ಳದೇ ಕಿವುಡುತನ ಪ್ರದರ್ಶಿಸಿರುವುದಾಗಿ ಮೋಹಿತ್‌ ಯಾದವ್‌ ಪತ್ನಿ ರಿಂಕಿ ಯಾದವ್‌ ಆರೋಪಿಸಿದ್ದಾರೆ. ಇತ್ತೀಚೆಗಷ್ಟೇ ಪತಿ ಬರೇಲಿಯ ರೀಜನಲ್‌ ಮ್ಯಾನೇಜರ್‌ ಗೆ ಮೊಬೈಲ್‌ ಕರೆ ಮಾಡಿದ್ದರೂ ಕೂಡಾ ಅವರು ನನ್ನ ಪತಿಯ ಯಾವುದೇ ಮಾತನ್ನು ಕೇಳಲು ಸಿದ್ದರಿರಲಿಲ್ಲವಾಗಿತ್ತು ಎಂದು ರಿಂಕಿ ದೂರಿದ್ದಾರೆ.

ಕೆಲಸ ಕಳೆದುಕೊಂಡ ಪರಿಣಾಮ ಪತಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ನನ್ನ ಪತಿ ಮಾನವೀಯತೆಗೆ ಬೆಲೆ ತೆರುವಂತಾಗಿದೆ ಎಂದು ಪತ್ನಿ ರಿಂಕಿ ನೋವನ್ನು ತೋಡಿಕೊಂಡಿದ್ದಾರೆ. ಪ್ರಯಾಣದ ವೇಳೆ ನಮಾಜ್‌ ಗಾಗಿ ಬಸ್‌ ಅನ್ನು ನಿಲ್ಲಿಸಿದ್ದ ವೇಳೆ ಪ್ರಯಾಣಿಕರೊಬ್ಬರು ವಿಡಿಯೋ ಚಿತ್ರೀಕರಣ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಬಳಿಕ ಯಾವುದೇ ನೋಟಿಸ್‌ ನೀಡದೇ ಮೋಹಿತ್‌ ಯಾದವ್‌ ಅವರನ್ನು ಉತ್ತರಪ್ರದೇಶ ಸಾರಿಗೆ ಇಲಾಖೆ ಕೆಲಸದಿಂದ ವಜಾಗೊಳಿಸಿತ್ತು.

Leave a Reply

Your email address will not be published. Required fields are marked *