Spread the love

ಸೂರತ್(ಗುಜರಾತ್):‌ ಇಸ್ರೋದ ವಿಜ್ಞಾನಿ ಎಂದು ಸುಳ್ಳು ಹೇಳಿ ಗುರುತಿಸಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನು ಸೂರತ್‌ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಚಂದ್ರಯಾನ-3ರ ಲ್ಯಾಂಡರ್‌ ಮಾಡ್ಯೂಲ್‌ ಅನ್ನು ವಿನ್ಯಾಸಗೊಳಿಸಿರುವುದಾಗಿ ಸೂರತ್‌ ನ ಮಾಧ್ಯಮಗಳಿಗೆ ಈತ ಸಂದರ್ಶನ ನೀಡಿರುವುದಾಗಿ ವರದಿ ತಿಳಿಸಿದೆ.

ಆರೋಪಿ ಮಿಥುಲ್‌ ತ್ರಿವೇದಿ (30ವರ್ಷ) ಎಂಬಾತ ಗುಜರಾತ್‌ ನ ಸೂರತ್‌ ನಗರದಲ್ಲಿ ತನ್ನ ಟ್ಯೂಷನ್‌ ತರಗತಿಗಳಿಗೆ ಹಚ್ಚಿನ ವಿದ್ಯಾರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಇಸ್ರೋ ವಿಜ್ಞಾನಿಯ ಸೋಗು ಹಾಕಿದ್ದು, ಈತನನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್‌ 23ರಂದು ಚಂದ್ರಯಾನ-3ರ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಸಾಫ್ಟ್‌ ಲ್ಯಾಂಡ್‌ ಆದ ನಂತರ ತ್ರಿವೇದಿ ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡಿದ್ದ. ಬಳಿಕ ತ್ರಿವೇದಿ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ವರದಿ ವಿವರಿಸಿದೆ.

ತಾನು ಇಸ್ರೋದ ಏನ್ಸಿಯಂಟ್‌ ಸೈನ್ಸ್‌ ಆಪ್ಲಿಕೇಶನ್‌ ಡಿಪಾರ್ಟ್‌ ಮೆಂಟ್‌ ನ ಅಸಿಸ್ಟೆಂಟ್‌ ಚೆಯರ್‌ ಮೆನ್‌ ಎಂದು ಹೇಳಿಕೊಂಡಿದ್ದ. ಅಷ್ಟೇ ಅಲ್ಲ 2022ರ ಫೆಬ್ರವರಿ 26ರಂದು ತಾನು ನೇಮಕಗೊಂಡಿರುವುದಾಗಿ ನಕಲಿ ಅಪಾಯಿಂಟ್‌ ಮೆಂಟ್‌ ಲೆಟರ್‌ ಅನ್ನು ತೋರಿಸುತ್ತಿದ್ದ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತನಿಖೆಯಲ್ಲಿ ತ್ರಿವೇದಿಗೂ ಇಸ್ರೋ ಸಂಸ್ಥೆಗೂ ಯಾವ ಸಂಬಂಧವೂ ಇಲ್ಲ ಎಂಬುದು ತಿಳಿದು ಬಂದಿದೆ. ಈತ ಜನರ ಹಾದಿ ತಪ್ಪಿಸುವ ನಿಟ್ಟಿನಲ್ಲಿ ಇಸ್ರೋ ವಿಜ್ಞಾನಿ ಎಂದು ಸೋಗು ಹಾಕಿ ಇಸ್ರೋ ಸಂಸ್ಥೆಯ ಘನತೆಗೆ ಧಕ್ಕೆ ತಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *