Spread the love

ಮೈಸೂರು: ಚಾಮುಂಡಿಪುರಂನಲ್ಲಿರುವ ಬಾಡಿಗೆ ಮನೆಯಲ್ಲಿ ಭಾನುವಾರ ಮಧ್ಯಾಹ್ನ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ.

ಪೊಲೀಸರ ಪ್ರಕಾರ, ಮಹದೇವಸ್ವಾಮಿ (45), ಅವರ ಪತ್ನಿ ಅನಿತಾ (38), ಪುತ್ರಿಯರಾದ ಚಂದ್ರಕಲಾ (17) ಮತ್ತು ಧನಲಕ್ಷ್ಮಿ (15)  ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇಲ್ಲಿನ ಬಂಡಿಪಾಳ್ಯದಲ್ಲಿ ಮಹದೇವಸ್ವಾಮಿ ತರಕಾರಿ ಅಂಗಡಿ ಇಟ್ಟುಕೊಂಡಿದ್ದರು.

ಕಳೆದ ಎರಡು ದಿನಗಳಿಂದ ಬಾಗಿಲು ತೆರೆಯದಿರುವುದನ್ನು ಗಮನಿಸಿದ ನೆರೆಹೊರೆಯವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

“ಮುಂಭಾಗದ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು. ಹೀಗಾಗಿ ಹಿಂಬದಿಯ ಬಾಗಿಲು ತೆರೆದು ನೋಡಿದಾಗ ನಾಲ್ವರು ಮೃತಪಟ್ಟಿರುವುದು ಕಂಡು ಬಂದಿದೆ. ನಾಲ್ವರಲ್ಲಿ ಒಬ್ಬಾಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆ ಹಿರಿಯ ಮಗಳು ಎಂದು ತಿಳಿದುಬಂದಿದೆ. ಇನ್ನು ಕೆಲವರು ನೆಲದ ಮೇಲೆ ಕುಳಿತ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಟ್ಟಡದ ಮಾಲಕರು ಮೊದಲ ಮಹಡಿಯಲ್ಲಿ ವಾಸವಾಗಿದ್ದು ಮೃತರ ಕುಟುಂಬವು ನೆಲ ಅಂತಸ್ತಿನಲ್ಲಿ ಕಳೆದ ಎರಡು ತಿಂಗಳಿಂದ ಬಾಡಿಗೆದಾರರಾಗಿ ವಾಸಿಸುತ್ತಿತ್ತು ಎಂದು ತಿಳಿದು ಬಂದಿದೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ಪ್ರಾರಂಭಿಸಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.

 

Leave a Reply

Your email address will not be published. Required fields are marked *