Spread the love

ಬೆಂಗಳೂರು: ಚಂದ್ರಯಾನ-3 ಯೋಜನೆ ಯಶಸ್ವಿಗೊಳಿಸಿದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ರೋಡ್ ಶೋ ನಡೆಸಿದ್ದು, ಇದರ ಕುರಿತಂತೆ ಕಾಂಗ್ರೆಸ್ ವ್ಯಂಗ್ಯವಾಡಿದೆ.

ರೋಡ್ ಶೋ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ಆರ್.ಅಶೋಕ್, ಮುನಿರತ್ನ, ಕೆ.ಗೋಪಾಲಯ್ಯ ಸೇರಿ ಹಲವು ಬಿಜೆಪಿ ನಾಯಕರು ಬ್ಯಾರಿಕೇಡ್ ಹೊರಗಡೆ ನಿಂತು ಪ್ರಧಾನಿ ಮೋದಿ ಅವರಿಗೆ ಕೈ ಬೀಸಿದರು. ಇದಕ್ಕೆ ವ್ಯಂಗ್ಯವಾಡಿರುವ ರಾಜ್ಯ ಕಾಂಗ್ರೆಸ್, ‘ರಾಜ್ಯ ಬಿಜೆಪಿ ನಾಯಕರನ್ನು ಮೋದಿ ಬೀದಿ ಪಾಲು ಮಾಡಿದ್ದಾರೆ’ ಎಂದು ಸಾಮಾಜಿಕ ಜಾಲತಾನ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

“ಬಿಜೆಪಿ ನಾಯಕರದ್ದು ಎಂತಹ ದುಸ್ಥಿತಿ. ರಾಜ್ಯ ಬಿಜೆಪಿಯ ‘ದಂಡ’ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲಾಗಿದ್ದಾರೆ! ಬಿಜೆಪಿಯ ಹೈಕಮಾಂಡ್ ಹಾಗೂ ಮೋದಿ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರನ್ನು ಹತ್ತಿರಕ್ಕೂ ಸೇರಿಸದೇ ಬೀದಿ ಪಾಲು ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ! ಛೇ, ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ” ಎಂದು ಛೇಡಿಸಿದೆ.

ರಾಜ್ಯದ ಬಿಜೆಪಿ ನಾಯಕರಿಗೆ ಹೈಕಮಾಂಡ್ ನಾಯಕರು ಕನಿಷ್ಠ ಪ್ರಾಮುಖ್ಯತೆಯನ್ನೂ ಕೊಡುತ್ತಿಲ್ಲ. ಮೋದಿಯ ಕೋಪ ತಣ್ಣಗಾಗುವವರೆಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುವುದಿಲ್ಲ, ಮೋದಿ ಕೋಪ ತಣ್ಣಗಾಗುವುದೂ ಇಲ್ಲ! ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ನೇಮಕ ಆಗುವುದೂ ಅನುಮಾನ, ಹಾಲಿ ಅಧ್ಯಕ್ಷ ಬೀದಿ ಪಾಲಾಗಿದ್ದಾರೆ! ರಾಜ್ಯ ಬಿಜೆಪಿ ಅಬ್ಬೇಪಾರಿಯಾಗಿದೆ ಎಂದಿದೆ.

ಬಿಜೆಪಿಯ ರಾಜ್ಯಾಧ್ಯಕ್ಷ, ಮಾಜಿ ಸಚಿವರುಗಳು, ಹಾಲಿ ಶಾಸಕರುಗಳು, ಹೀಗೆ ಬೀದಿಪಾಲಾಗಿದ್ದಾರೆ ಎಂದರೆ “ಸರ್ವಾಧಿಕಾರಿ”ಯ ಮೊದಲ ಬಲಿಪಶುಗಳು ಬಿಜೆಪಿಗರಿಗೇ ಅಲ್ಲವೇ?  ಆತ್ಮ ಗೌರವ, ಸ್ವಾಭಿಮಾನವಿಲ್ಲದೆ ಕೈಬೀಸುತ್ತಿದ್ದಾರೆ ಎಂದರೆ ಗುಲಾಮಗಿರಿಯ ಪರಮಾವಧಿಗೆ ತಲುಪಿದ್ದಾರೆ ಎಂದರ್ಥವಲ್ಲವೇ ಎಂದು ಕಾಂಗ್ರೆಸ್ ಕುಟುಕಿದೆ.

 

Leave a Reply

Your email address will not be published. Required fields are marked *