Spread the love

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದೇನೆ ಎನ್ನುವ ಮೂಲಕ ಮಾಜಿ ವಿಧಾನ ಪರಿಷತ್‌ ಸದಸ್ಯ, ಜೆಡಿಎಸ್‌ ಮುಖಂಡ ಆಯನೂರು ಮಂಜುನಾಥ ಶಾಕ್ ನೀಡಿದ್ದಾರೆ.

ಕಾಂಗ್ರೆಸ್ನ ಆಪರೇಷನ್ ಹಸ್ತ ಭಾರೀ ಸದ್ದು ಮಾಡುತ್ತಿದೆ. ಹೀಗಿರುವಾಗಲೇ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದ ಆಯನೂರು ಮಂಜುನಾಥ್ ಅವರನ್ನು ಕಾಂಗ್ರೆಸ್ ಆಪರೇಷನ್ ಮಾಡಿತಾ ಎನ್ನುವ ಪ್ರಶ್ನೆ ಹುಟ್ಟಿದೆ. ಅದಕ್ಕೆ ಕಾರಣ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ. ಇಂದು ಬೆಳಗ್ಗೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿ ಬಂದಿದ್ದರು.

ಈ ಬಗ್ಗೆ ಸುದ್ದಿಗಾರರು ಕೇಳಿದಾಗ, ಈ ಹಿಂದೆ ನಾನು ಬಿಜೆಪಿ ಬಿಡಬೇಕು ಎಂದು ನಿರ್ಧಾರ ಮಾಡಿದ್ದಾಗ ಕಾಂಗ್ರೆಸ್ ನಲ್ಲಿ ಅವಕಾಶ ಇರಲಿಲ್ಲ. ಆಗ ಹೆಚ್ ಡಿ ಕುಮಾರಸ್ವಾಮಿಯವರು ಅವಕಾಶ ಕೊಟ್ಟರು. ಬದಲಾದ ಸನ್ನಿವೇಶದಲ್ಲಿ ಮುಂದಿನ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದಿದ್ದಾರೆ.

ವಿಧಾನಸಭೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದ ಆಯನೂರು ಮಂಜುನಾಥ್ ಅದಕ್ಕಾಗಿ ವಿಧಾನ ಪರಿಷತ್ ನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಕೆಪಿಸಿಸಿ ಮಟ್ಟದಲ್ಲಿ ಒಪ್ಪಿಗೆ ಸಿಕ್ಕರೂ ಎಐಸಿಸಿಯಲ್ಲಿ ಅದಕ್ಕೆ ತಡೆ ಬಿದ್ದಿತ್ತು. ಹೀಗಾಗಿ ಜೆಡಿಎಸ್ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಹಿಂದೆಯೇ ನಾನು ಬಿಜೆಪಿ ಪಕ್ಷವನ್ನು ಬಿಡಬೇಕು ಎಂದು ತೀರ್ಮಾನಿಸಿದ್ದೆ. ಆದರೆ, ಆಗ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಅವಕಾಶವಿರಲಿಲ್ಲ. ಆ ಸಂದರ್ಭದಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವಕಾಶ ನೀಡಿದ್ದರಿಂದ ಜೆಡಿಎಸ್ ಸೇರ್ಪಡೆಗೊಂಡಿದ್ದೆ. ಈ ಸಂದರ್ಭದಲ್ಲಿ ಸಹಜವಾಗಿಯೇ ಶಿವಮೊಗ್ಗ ರಾಜಕಾರಣದ ಬಗ್ಗೆ ಚರ್ಚೆಯಾಯಿತು. ಪಕ್ಷ ಸೇರ್ಪಡೆ ಬಗ್ಗೆ ಅಧ್ಯಕ್ಷರ ಜೊತೆ ಒಂದು ಹಂತದ ಮಾತುಕತೆಯಾಗಿದೆ. ನಾನು ವಿಧಾನ ಪರಿಷತ್ ಆಕಾಂಕ್ಷಿಯಾಗಿದ್ದೇನೆ, ಆದರೆ ಪಕ್ಷ ಸೇರ್ಪಡೆಯಾಗುವಾಗ ಯಾವುದೇ ಷರತ್ತನ್ನು ಹಾಕುವುದಿಲ್ಲ. ಪಕ್ಷ ಟಿಕೆಟ್ ನೀಡಿದರೆ ಖಂಡಿತಾ ಸಂತೋಷದಿಂದ ಸ್ಪರ್ಧಿಸುತ್ತೇನೆ ಎಂದರು.

ಇನ್ನು ಇದೇ ವೇಳೆ ಪಕ್ಷಾಂತರ ಕುರಿತು ಮಾತನಾಡಿದ ಅವರು, ಯಡಿಯೂರಪ್ಪರವರು ನಮ್ಮ ಹಿರಿಯ ನಾಯಕರು. ನನ್ನ ರಾಜಕೀಯ ಬದುಕಿನಲ್ಲಿ ಅವರ ಪಾತ್ರ ಬಹು ದೊಡ್ಡದಿದೆ. ರಾಜಕಾರಣಿಯಾಗಿ ಮುಂದಿನ ಚುನಾವಣಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇನೆ. ಚುನಾವಣೆ ಒಂದು ರೀತಿ ಯುದ್ಧವಿದ್ದಂತೆ ಅದನ್ನು ಗಮನದಲ್ಲಿಟ್ಟುಕೊಂಡೇ ಪಕ್ಷ ಬದಲಿಸುತ್ತಿದ್ದೇನೆ ಎಂದರು.

ಆಯನೂರು ಮಂಜುನಾಥ್ ಬಿಜೆಪಿಯಿಂದ ಪರಿಷತ್ ಸದಸ್ಯರಾಗಿದ್ದರು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಟಿಕೆಟ್ ನೀಡದ್ದಕ್ಕೆ ಅಸಮಾಧಾನಗೊಂಡು ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರಿ ಶಿವಮೊಗ್ಗ ನಗರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಸೋಲುಕಂಡಿದ್ದರು.

 

Leave a Reply

Your email address will not be published. Required fields are marked *