ಮುಂಬೈ: ಹಿರಿಯ ಉದ್ಯಮಿ ರತನ್ ಟಾಟಾ ಅವರಿಗೆ ಮಹಾರಾಷ್ಟ್ರ ಸರ್ಕಾರ ಸ್ಥಾಪಿಸಿದ ಮೊದಲ ‘ಉದ್ಯೋಗ ರತ್ನ’ ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಲಾಯಿತು.
ದಕ್ಷಿಣ ಮುಂಬೈನ ಕೊಲಾಬಾದಲ್ಲಿರುವ ರತನ್ ಟಾಟಾ ಅವರ ಮನೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್, ಅಜಿತ್ ಪವಾರ್ ಅವರು 85 ವರ್ಷದ ಟಾಟಾ ಸನ್ಸ್‌ನ ಅಧ್ಯಕ್ಷರಿಗೆ ‘ಉದ್ಯೋಗ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ(MIDC) ನೀಡುವ ಈ ಪ್ರಶಸ್ತಿಯು, ಶಾಲು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, ಟಾಟಾ ಅವರಿಗೆ ‘ಉದ್ಯೋಗ ರತ್ನ’ ಪ್ರಶಸ್ತಿ ನೀಡಿ ಗೌರವಿಸಿರುವುದು ಪ್ರಶಸ್ತಿಯ ಘನತೆಯನ್ನು ಹೆಚ್ಚಿಸಿದೆ ಎಂದರು.
ಎಲ್ಲ ಕ್ಷೇತ್ರಗಳಲ್ಲಿ ಟಾಟಾ ಸಮೂಹದ ಕೊಡುಗೆ ಅಪಾರವಾಗಿದೆ. ಟಾಟಾ ಎಂದರೆ ನಂಬಿಕೆ ಎಂದು ಮಹಾ ಸಿಎಂ ಹೇಳಿದ್ದಾರೆ.