ಮೈಸೂರು : ಲಿಫ್ಟ್ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಥವಾ ಒಂದು ಊರಿನಿಂದ ಮತ್ತೊಂದು ಊರಿನವರಗೆ ಹೋಗಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ಊರಲ್ಲ, ಜಿಲ್ಲೆಯಲ್ಲ, ರಾಜ್ಯವು ಅಲ್ಲ, ಕೇವಲ ಲಿಫ್ಟ್ ಮೂಲಕವೇ ಫ್ರಾನ್ಸ್ ನಿಂದ 14 ದೇಶ ದಾಟಿ ಮೈಸೂರಿಗೆ ಭೇಟಿ ಕೊಟ್ಟಿದ್ದಾನೆ. ಈತ ಲಿಫ್ಟ್ ಮೂಲಕ ತಲುಪುವ ಡೆಸ್ಟಿಮೇಷನ್ ಕೇಳಿದರೆ ನಿಜಕ್ಕೂ ಅಚ್ಚರಿ ಆಗುತ್ತದೆ. ಅವನ ಲಿಫ್ಟ್ ಜರ್ನಿಯ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ವಿಮಾನ ಏರಲಿಲ್ಲ, ರೈಲು ಹತ್ತಲಿಲ್ಲ, ಬಸ್‌ಗೆ ಅಂತ ಒಂದು ಪೈಸೆ ಹಣವನ್ನೂ ಖರ್ಚು ಮಾಡಿಲ್ಲ. ಆದರೂ ಸುಮಾರು 20 ಸಾವಿರ ಕಿಲೋಮೀಟರ್ ಮೀರಿದ ಪ್ರಯಾಣ ಮಾಡಿರುವ ವ್ಯಕ್ತಿಯ ಹೆಸರು ಲುಕಾಸ್ ವೆನ್ನಾರ್. ದೂರದ ಫ್ರಾನ್ಸ್ ದೇಶದ ಪ್ರಜೆ. 23 ವರ್ಷದ ಲುಕಾಸ್ ವೆನ್ನಾರ್ ಕಳೆದ 7 ತಿಂಗಳಿನಿಂದ ವಿಶ್ವ ಪರ್ಯಟನೆ ಮಾಡುತ್ತಿದ್ದು, ಇದಕ್ಕಾಗಿ ಒಂದೇ ಒಂದು ರೂಪಾಯಿ ಸಂಚಾರಿ ವೆಚ್ಚ ಖರ್ಚು ಮಾಡಿಲ್ಲ.
ಲುಕಾಸ್ ವೆನ್ನಾರ್ ಇದೇ ವರ್ಷ ಫೆಬ್ರವರಿ 4 ರಂದು ಫ್ರಾನ್ಸ್ನಿಂದ ತನ್ನ ವಿಶೇಷ ಪ್ರಯಾಣ ಆರಂಭಿಸಿದ್ದಾರೆ. ಎಲ್ಲಿಯೂ ಟಿಕೇಟ್ ಖರೀದಿಸದೆ ಕೇವಲ ಲಿಫ್ಟ್ ಮೂಲಕ ಪ್ರಯಾಣ ಮಾಡುತ್ತಿರುವ ಇವರು ಹಡಗು, ಕಾರು, ಬೈಕ್, ಟ್ರಕ್ಗಳ ಮೂಲಕ ಸಂಚಾರ ಮಾಡಿಕೊಂಡು ಫ್ರಾನ್ಸ್‌ನಿಂದ ಆರಂಭಿಸಿ ಆಫ್ರಿಕಾ, ಚೈನಾ, ಟಿಬೇಟ್, ಖಜಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶ ಸೇರಿ 14 ದೇಶಗಳಲ್ಲಿ ಸುತ್ತಾಡಿದ್ದಾನೆ.
ಇಷ್ಟೆಲ್ಲ ದೇಶಗಳನ್ನು ಸುತ್ತಾಡಿರುವ ಲುಕಾಸ್ ಸದ್ಯ ಭಾರತದ ಪ್ರವಾಸದಲ್ಲಿ ಇದ್ದಾರೆ. ಉತ್ತರ ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಂಚಾರ ಮಾಡುತ್ತಿರುವ ಇವರು ಮೈಸೂರಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಮೈಸೂರು ಅರಮನೆ ನೋಡಿ ಸಕತ್ ಖುಷಿಪಟ್ಟರು.
ಭಾರತೀಯರ ಆತ್ಮೀಯತೆಗೆ ಮನಸೋತಿರುವ ಈತ ಭಾರತದಲ್ಲಿ ಒಟ್ಟು ಎರಡು ತಿಂಗಳು ಸಂಚಾರ ಮಾಡಿದ್ದಾರೆ. ಕೆಆರ್‌ಎಸ್ ವೀಕ್ಷಣೆ ಮುಗಿಸಿ ನಿಂತಿದ್ದವರಿಗೆ ಶ್ರೀರಂಗಪಟ್ಟಣದ ಭರತ್ ಎಂಬುವರು ಮೈಸೂರು ವರೆಗೆ ಲಿಫ್ಟ್ ಕೊಟ್ಟಿದ್ದಾರೆ.
ಒಟ್ಟಾರೆ ಮೈಸೂರು ಪ್ರವಾಸ ಮುಗಿಸಿ, ಶ್ರೀಲಂಕಾ ಕಡೆಗೆ ಸಂಚಾರ ಆರಂಬಿಸಿರುವ ಈತನಿಗೆ ಸ್ವಿಟ್ಜರ್ಲೆಂಡ್ ವರೆಗೆ ಲಿಫ್ಟ್ ಮೂಲಕವೇ ಸಂಚಾರ ಮಾಡುವ ಗುರಿ ಇದೆ. ಇವರ ವಿಶೇಷ ಪ್ರವಾಸ ಯಶಸ್ವಿಯಾಗಲಿ.