Spread the love

ಖ್ಯಾತ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ನಿಧನ ಹೊಂದಿರುವುದು ಚಿತ್ರರಂಗಕ್ಕೆ ನೋವು ತಂದಿದೆ. ಅಭಿಮಾನಿಗಳು ಕೂಡ ಕಂಬನಿ ಮಿಡಿಯುತ್ತಿದ್ದಾರೆ.

ಡಾ. ರಾಜ್ ಕುಮಾರ್ ಕುಟುಂಬಕ್ಕೆ ವಿಜಯ್ ರಾಘವೇಂದ್ರ  ಅವರು ಹತ್ತಿರದ ಸಂಬಂಧಿ. ಪಾರ್ವತಮ್ಮ ರಾಜ್ಅ ಕುಮಾರ್ ಅವರ  ಸಹೋದರನ ಮಕ್ಕಳು ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ. ರಾಜ್ ಕುಟುಂಬಕ್ಕೆ ಒಂದರ ಹಿಂದೊಂದು ಆಘಾತ ಎದುರಾಗುತ್ತಲೇ ಇದೆ. ಪುನೀತ್ ರಾಜ್ ಕುಮಾರ್  ಅವರ ನಿಧನದಿಂದ ಸ್ಪಂದನಾ ಮರಣದ ತನಕ ಸರಣಿ ದುರಂತ ಸಂಭವಿಸಿದೆ. ಇದು ಅವರ ಕುಟುಂಬಕ್ಕೆ ತೀವ್ರ ನೋವುಂಟು ಮಾಡಿದೆ. ಒಂದು ದುಃಖವನ್ನು ಮರೆಯುವ ಮುನ್ನವೇ ಮತ್ತೊಂದು ಆಘಾತ ಎದುರಾಗುತ್ತಿರುವುದು ನಿಜಕ್ಕೂ ದುರದೃಷ್ಟದ ಸಂಗತಿ. ಪುನೀತ್ ರಾಜ್ ಕುಮಾರ್ ನಿಧನದಿಂದ ಈವರೆಗೆ ಏನೆಲ್ಲ ಏಯಿತು ಎಂಬ ಬಗ್ಗೆ ಇಲ್ಲಿದೆ ಮಾಹಿತಿ..

ಪುನೀತ್ ರಾಜ್ ಕುಮಾರ್ ನಿಧನ (2021 ಅಕ್ಟೋಬರ್ 29):

ಆ ದಿನವನ್ನು ಅಪ್ಪು ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಫಿಟ್ನೆಸ್ ಗೆ ತುಂಬ ಮಹತ್ವ ನೀಡುತ್ತಿದ್ದ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ನಿಧನ ಹೊಂದಿದಾಗ ಯಾರಿಗೂ ನಂಬಲು ಸಾಧ್ಯವಾಗಲಿಲ್ಲ. ಅವರ ನಿಧನದಿಂದ ಅಸಂಖ್ಯಾತ ಅಭಿಮಾನಿಗಳಿಗೆ ದಿಕ್ಕೇ ತೋಚದಂತಾಯಿತು. ಆ ನೋವು ಎಂದಿಗೂ ಮರೆಯಾಗುವಂಥದ್ದಲ್ಲ.

ಅಶ್ವಿನಿ ತಂದೆ ರೇವನಾಥ್ ಮರಣ: (2022 ಫೆಬ್ರವರಿ 20):

ಪುನೀತ್ ರಾಜ್ಕುಮಾರ್ ಅವರು ನಿಧನರಾದ ಬಳಿಕ ಅಶ್ವಿನಿ ಅವರು ಅನುಭವಿಸಿದ ನೋವನ್ನು ಪದಗಳಲ್ಲಿ ವಿವರಿಸಲು ಆಗದು. ಅದಾಗಿ ಕೆಲವೇ ತಿಂಗಳು ಕಳೆಯುವುದರಲ್ಲಿ ಅವರ ಕುಟುಂಬಕ್ಕೆ ಮತ್ತೊಂದು ಆಘಾತ ಉಂಟಾಯಿತು. ಅಶ್ವಿನಿ ಅವರ ತಂದೆ ರೇವನಾಥ್ ಅವರು ಫೆಬ್ರವರಿ 20ರಂದು ನಿಧನರಾದರು. ಅಶ್ವಿನಿಯವರು ಪತಿಯನ್ನು ಕಳೆದುಕೊಂಡ ನೋವಿನ ಬೆನ್ನಲ್ಲೇ ತಂದೆಯನ್ನೂ ಕಳೆದುಕೊಳ್ಳುವಂತಾಗಿದ್ದಕ್ಕೆ ಅಭಿಮಾನಿಗಳು ವಿಧಿಯನ್ನು ಶಪಿಸಿದರು.

ಕಾಲು ಕಳೆದುಕೊಂಡ ಸೂರಜ್ (2023 ಜೂನ್ 24):

ಪಾರ್ವತಮ್ಮ ರಾಜ್ ಕುಮಾರ್ ಅವರ ತಮ್ಮನ ಮಗ ಸೂರಜ್ ಅವರು ಕೆಲವು ವಾರಗಳ ಹಿಂದೆ ಸಂಭವಿಸಿದೆ ಗಂಭೀರ ಅಪಘಾತದಲ್ಲಿ ಕಾಲು ಕಳೆದುಕೊಂಡರು. ಜೂನ್ 24ರಂದು ಬೈಕ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಅವರಿಗೆ ಲಾರಿಯೊಂದು ಡಿಕ್ಕಿ ಹೊಡೆಯಿತು. ಆ ಅಪಘಾತದಲ್ಲಿ ಅವರ ಬಲಗಾಲು ಸಂಪೂರ್ಣ ನಜ್ಜುಗುಜ್ಜಾಯಿತು. ಅದರ ಪರಿಣಾಮವಾಗಿ ಅವರ ಕಾಲನ್ನು ವೈದ್ಯರು ಕತ್ತರಿಸಬೇಕಾಯಿತು. ಹೀರೋ ಆಗಬೇಕು ಎಂದು ಕನಸು ಕಂಡಿದ್ದ ಸೂರಜ್ ಅವರಿಗೆ ಈ ಘಟನೆಯಿಂದ ಆದ ನಷ್ಟ ಅಷ್ಟಿಷ್ಟಲ್ಲ.

ಹೃದಯಾಘಾತದಿಂದ ಸ್ಪಂದನಾ ನಿಧನ: (2023 ಆಗಸ್ಟ್ 06):

ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಫ್ಯಾಮಿಲಿ ಸಮೇತ ಬ್ಯಾಂಕಾಕ್ ಗೆ ತೆರಳಿದ್ದರು. ಅಲ್ಲಿ ಅವರಿಗೆ ಹೃದಯಾಘಾತ ಆಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಪ್ರಯೋಜನ ಆಗಲಿಲ್ಲ. ಅವರ ನಿಧನದಿಂದ ಕುಟುಂಬದಲ್ಲಿ ಶೋಕ ಆವರಿಸಿದೆ. ವಿಜಯ್ ರಾಘವೇಂದ್ರ ಅವರಿಗೆ ಎಲ್ಲರೂ ಸಾಂತ್ವನ ಹೇಳುತ್ತಿದ್ದಾರೆ. ಸ್ಪಂದನಾ ಅವರನ್ನು ತುಂಬ ಇಷ್ಟಪಟ್ಟು ವಿಜಯ್ ರಾಘವೇಂದ್ರ ಮದುವೆ ಆಗಿದ್ದರು. ಪತ್ನಿಯ ಅಗಲಿಕೆಯಿಂದ ಅವರೀಗ ಕಣ್ಣೀರು ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *