Spread the love

ಡಾ. ಪ್ರೀತಂ

ಭದ್ರಾವತಿಯ ಹಲವು ಕಾರ್ಮಿಕರ ಬಹುದಿನಗಳ ಕನಸು ಕೊನೆಗೂ ನನಸಾಗಿದೆ. ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನಾರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು. ವಿಐಎಸ್‌ಎಲ್ ಕಾರ್ಖಾನೆಯ ಮರು ಕಾರ್ಯಾರಂಭಕ್ಕೆ ಭಾರತೀಯ ಉಕ್ಕು ಪ್ರಾಧಿಕಾರ ಅನುಮತಿ ನೀಡಿದೆ. ಆಗಸ್ಟ್ ೧೦ರಿಂದ ಬಾರ್‌ಮಿಲ್ ಶುರುವಾಗಲಿದ್ದು, ಶೀಘ್ರದಲ್ಲಿಯೇ ವಿಐಎಸ್‌ಎಲ್ ಕಾರ್ಖಾನೆ ಕೆಲಸ ಪ್ರ್ರಾರಂಭಮಾಡಲಿದೆ. ಇದರಿಂದ ಭದ್ರಾವತಿ ನಗರದ ವೈಭವ ಮತ್ತೆ ಗರಿಗೆದರಲಿದೆ ಮತ್ತೆ ಫಳಫಳಿಸಲಿದೆ ಕಪ್ಪು ಚಿನ್ನ!.

ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ ಸರ್ ಎಂ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರ ದೂರದೃಷ್ಟಿಯಿಂದ ೧೯೨೩ರಲ್ಲಿ ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಆರಂಭವಾಗಿತ್ತು. ದೇಶದ ಭೂಪಟದಲ್ಲಿ ಉತ್ಕೃಷ್ಟ ಉಕ್ಕು, ಸಿಮೆಂಟ್, ಕಾಗದ ಉತ್ಪಾದನೆಗೆ ಭದ್ರಾವತಿ ಹೆಸರಾಗಿತ್ತು. ಕರ್ನಾಟಕ ಸರ್ಕಾರದ ಅಧೀನದಲ್ಲಿದ್ದ ವಿಐಎಸ್‌ಎಲ್ ಅನ್ನು ಆಧುನೀಕರಣದ ಉದ್ದೇಶದಿಂದ ೧೯೮೯ರಲ್ಲಿ ಭಾರತ ಸರ್ಕಾರಕ್ಕೆ ಒಪ್ಪಿಸಲಾಯಿತು. ಬಳಿಕ ಉಕ್ಕು ಪ್ರಾಧಿಕಾರಕ್ಕೆ ವಿಐಎಸ್‌ಎಲ್ ಅನ್ನು ಸೇರಿಸಲಾಗಿತ್ತು. ಗಣಿ ಇಲ್ಲದ ಕಾರಣ ಹಾಗೂ ನಷ್ಟದ ಕಾರಣದಿಂದ ವಿಐಎಸ್‌ಎಲ್ ಮುಚ್ಚುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು.

ವಿಐಎಸ್‌ಎಲ್‌ಗೆ ೧೦೦ ವರ್ಷ ತುಂಬಿರುವಾಗಲೇ ಈ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಿತ್ತು. ಆದರೆ, ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (ವಿಐಎಸ್‌ಎಲ್) ಮುಚ್ಚಬಾರದು ಪುನಃ ಉತ್ಪಾದನೆ ಆರಂಭಿಸಬೇಕು ಎಂದು ಹೋರಾಟ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕಳೆದ ತಿಂಗಳು ವಿಐಎಸ್‌ಎಲ್ ಮುಚ್ಚುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪುನರ್ ಪರಿಶೀಲಿಸಬೇಕು ಎಂದು ಕೇಂದ್ರ ಉಕ್ಕು ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಪತ್ರ ಬರೆದಿದ್ದರು.

ಲಕ್ಷಾಂತರ ಜನರಿಗೆ ಅನ್ನ, ನೀರು, ಆಶ್ರಯ ನೀಡಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಯಾರೂ ಮರೆಯಲು ಸಾಧ್ಯವಿಲ್ಲ. ವಿಐಎಸ್‌ಎಲ್ ಕಾರ್ಖಾನೆ ೭೦ ರ ದಶಕದಲ್ಲಿ ಸುಮಾರು ೨೦,೦೦೦ ಕಾರ್ಮಿಕರನ್ನು ಹೊಂದಿದ್ದ ಕಾರಣ ಭದ್ರಾವತಿಯ ಹೆಸರು ಅಂತರ ರಾಷ್ಟ್ರೀಯ ಮಟ್ಟದಲ್ಲೂ ಜನ ಮನ್ನಣೆ ಪಡೆದುಕೊಂಡಿತ್ತು.

ಸ್ವಾತಂತ್ರ್ಯದ ನಂತರ ಮೈಸೂರು ಸಂಸ್ಥಾನದಿಂದ ರಾಜ್ಯ ಸರ್ಕಾರದ ಒಡೆತನಕ್ಕೆ ಹಸ್ತಾಂತರಗೊಂಡ ಈ ಕಾರ್ಖಾನೆ ಒಂದು ಹಂತದವರೆಗೆ ಚೆನ್ನಾಗಿಯೇ ನಡೆಯಿತ್ತು. ಆ ನಂತರ ಬಂದ ಸರ್ಕಾರದ ಆರ್ಥಿಕ ಹಾಗೂ ಜನ ವಿರೋಧಿ ನೀತಿಗಳಿಂದ ಕಾರ್ಖಾನೆಗಳಲ್ಲಿ ಹಗಲಿರುಳು ಸದ್ದು ಮಾಡುತ್ತಿದ್ದ ಉತ್ಪಾದಕ ಘಟಕಗಳು ಒಂದೊಂದಾಗಿ ಸ್ತಬ್ಧಗೊಳ್ಳಲು ಪ್ರಾರಂಭವಾದವು. ಕಾರ್ಖಾನೆಗಳಲ್ಲಿ ಉತ್ಪಾದನೆ ಸ್ಥಗಿತಗೊಳಿಸಿದ್ದರಿಂದ ಆಡಳಿತ ಮಂಡಳಿ ಖರ್ಚು ವೆಚ್ಚಗಳನ್ನು ಸರಿದೂಗಿಸಲಾಗದೆ ಕಾರ್ಖಾನೆಗಳು ನಷ್ಟದ ಹಾದಿ ಹಿಡಿದವು. ಕರ್ನಾಟಕ ರಾಜ್ಯ ಸರ್ಕಾರ ನಷ್ಟದ ಹೊರೆ ತಪ್ಪಿಸಿಕೊಳ್ಳಲು ವಿಐಎಸ್‌ಎಲ್ ಅನ್ನು ಕೇಂದ್ರದ ಅಧೀನಕ್ಕೆ ಒಪ್ಪಿಸಲು ಶತ ಪ್ರಯತ್ನ ನಡೆಸಿದ ಫಲವಾಗಿ ಆಗಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರು ೧೯೮೯ ರಲ್ಲಿ ವಿಐಎಸ್‌ಎಲ್ ಅನ್ನು ಭಾರತೀಯ ಉಕ್ಕು ಪ್ರಾಧಿಕಾರದ (ಸೈಲ್) ಅಂಗ ಸಂಸ್ಥೆಯಾಗಿ ಸೇರ್ಪಡೆಗೊಳಿಸಿದರು. ಆದರೂ ನಷ್ಟದ ಹಾದಿಯಿಂದ ವಿಮುಕ್ತಿಗೊಳ್ಳದ ಈ ಕಾರ್ಖಾನೆಯನ್ನು ಆಗಿನ ಪ್ರಧಾನಿ ಹೆಚ್. ಡಿ. ದೇವೇಗೌಡ ರವರು೧೯೯೭ ರಲ್ಲಿ ವಿಐಎಸ್‌ಎಲ್ ಅನ್ನು ಸಂಪೂರ್ಣವಾಗಿ ಸೈಲ್ ಗೆ ಸೇರ್ಪಡೆಗೊಳಿಸಿ ದರ ಮೂಲಕ ಈ ಕಾರ್ಖಾನೆಯ ಕಾಯಕಲ್ಪಕ್ಕೆ ಮುಂದಾದರು. ವಿಐಎಸ್‌ಎಲ್ ಅನ್ನು ಸಂಪೂರ್ಣವಾಗಿ ವಿಲೀನಗೊಳಿಸಿಕೊಂಡಿದ್ದರು ಸೈಲ್ ಆಡಳಿತ ಮಂಡಳಿ ಈ ಕಾರ್ಖಾನೆಯ ಅಭಿವೃದ್ಧಿಗೆ ಒಂದು ನಯಾ ಪೈಸೆಯ ನೆರವನ್ನು ನೀಡದೆ ದಕ್ಷಿಣ ಭಾರತದ ಕಾರ್ಖಾನೆಗಳ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸಿದ ಪರಿಣಾಮ

ಈ ಕಾರ್ಖಾನೆ ಮುಚ್ಚಲು ಕಾರಣ ಎಂದರೆ ತಪ್ಪಗಲಾರದು. ಇದರಿಂದಾಗಿ ಕಾರ್ಖಾನೆಯ ಕಾರ್ಮಿಕರು, ಅವರ ಕುಟುಂಬ ಬೀದಿ ಪಾಲಾಯಿತ್ತು.

೨೦೧೬ರಲ್ಲಿ ಕೇಂದ್ರ ಸಚಿವ ಸಂಪುಟ ವಿಐಎಸ್‌ಎಲ್ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಒಪ್ಪಿಗೆ ನೀಡಿತ್ತು. ಡಿಐಪಿಎಎಂ ಮೂಲಕ ಬಿಡ್ ಸಹ ಆಹ್ವಾನಿಸಿತ್ತು. ಆದರೆ ಬಿಡ್‌ದಾರರು ಆಸಕ್ತಿ ತೋರದ ಕಾರಣ ಕೇಂದ್ರ ಸರ್ಕಾರ ಖಾಸಗೀಕರಣ ಪ್ರಕ್ರಿಯೆ ವಾಪಸ್ ಪಡೆದಿತ್ತು. ಖಾಸಗೀಕರಣಕ್ಕೆ ಉದ್ಯೋಗಿಗಳು ಸಹ ವಿರೋಧ ವ್ಯಕ್ತಪಡಿಸಿದ್ದರು. ಕೇಂದ್ರ ಉಕ್ಕು ಖಾತೆ ಸಚಿವರು ಮೂರು ಬಾರಿ ವಿಐಎಸ್‌ಎಲ್‌ಗೆ ಭೇಟಿ ನೀಡಿದ್ದರು. ರಾಜ್ಯ ಸರ್ಕಾರ ಗಣಿ ಮಂಜೂರು ಮಾಡಿದರೆ, ಕಾರ್ಖಾನೆಯ ಅಧುನೀಕರಣಕ್ಕೆ ಹೂಡಿಕೆ ಮಾಡುವುದಾಗಿ ಭರವಸೆ ನೀಡಿದ್ದರು. ೨೦೧೭ರಲ್ಲಿ ರಾಜ್ಯ ಸರ್ಕಾರ ವಿಐಎಸ್‌ಎಲ್‌ಗೆ ಸಂಡೂರು ತಾಲೂಕಿನ ರಾಮದುರ್ಗದಲ್ಲಿ ೧೫೦ ಎಕರೆ ಗಣಿ ಮಂಜೂರು ಮಾಡಿದೆ.

ಕಾರ್ಮಿಕರಿಂದ ನಿರಂತರ ಹೋರಾಟ :

ಇಲ್ಲಿಯವರೆಗೆ ೭೦೦ ಕೋಟಿ ಹಣ ಹೂಡಿಕೆ ಮಾಡಿದ್ದು ಬಿಟ್ಟರೆ, ಕಾರ್ಖಾನೆ ಬಗ್ಗೆ ನಿರ್ಲಕ್ಷ ವಹಿಸಿದ್ದೇ ಹೆಚ್ಚು. ೧೯೧೮-೧೯೧೯ರಲ್ಲಿ ಆರಂಭವಾದ ಕಾರ್ಖಾನೆಯಲ್ಲಿ ೧೯ ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದರು. ೧೦೦ ವರ್ಷದ ಇತಿಹಾಸ ಇರುವ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಅನೇಕ ಕಾರ್ಮಿಕ ಸಂಘಟನೆಗಳು, ರಾಜಕಾರಣಿಗಳು, ಸಂಘ ಸಂಸ್ಥೆಗಳು, ವ್ಯಾಪಾರಸ್ಥರು, ನೌಕರರು, ವಿದ್ಯಾರ್ಥಿಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿ ಕಾರ್ಮಿಕರ ಹೋರಾಟ ಕೈ ಜೋಡಿಸಿದರು. ಇದೀಗ ಈ ಎಲ್ಲಾ ಕಾರ್ಮಿಕರ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ.

ಭದ್ರಾವತಿಯ ಸಮಸ್ತ ಜನರ ಪ್ರಾರ್ಥನೆ ಫಲ ಕೊಟ್ಟಿದೆ:

ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಆರಂಭಕ್ಕೆ ಕಾರಣರಾದ  ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಹಣಕಾಸು ಸಚಿವೆ  ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಉಕ್ಕು ಸಚಿವ  ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕೃತಜ್ಞತೆಗಳು. ಅಭಿನಂದನೆಗಳು. ಭದ್ರಾವತಿಯ ಸಮಸ್ತ ಜನರ ಪ್ರಾರ್ಥನೆ ಫಲ ಕೊಟ್ಟಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *