ಶಿವಮೊಗ್ಗ : ಮುಂಗಾರು ಮಳೆ ಹಿನ್ನೆಲೆ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ರಾಜ್ಯದ ಪ್ರಸಿದ್ಧ ಪ್ರವಾಸಿ ಕೇಂದ್ರ ಹಾಗೂ ಭಕ್ತರ ಶ್ರದ್ಧಾಕೇಂದ್ರ ಕೊಡಚಾದ್ರಿ ಗಿರಿಗೆ ಜುಲೈ 30ರಿಂದ ಮುಂದಿನ ಆದೇಶದವರೆಗೆ ವಾಹನದಲ್ಲಿ ತೆರಳುವುದು ಹಾಗೂ ಚಾರಣ ಮಾಡುವುದನ್ನು ಸಂಪೂರ್ಣ ನಿಷೇಧಿಸಿ ವನ್ಯಜೀವಿ ವಿಭಾಗ ಆದೇಶ ಹೊರಡಿಸಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪ್ರವಾಸಿ ತಾಣ ಕೊಡಚಾದ್ರಿಗೆ ಕಟ್ಟಿನಹೊಳೆ ಮೂಲಕ ತೆರಳುವ ವಾಹನ ಹಾಗೂ ಚಾರಣಕ್ಕೆ ನಿರ್ಬಂಧ ವಿಧಿಸಲಾಗಿದೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ವಿಪರೀತ ಮಳೆಯಿಂದಾಗಿ ಮಲೆನಾಡು ವ್ಯಾಪ್ತಿಯ ಪ್ರವಾಸ ತಾಣಗಳು ಅಸುರಕ್ಷತವಾಗಿವೆ. ಹೀಗಾಗಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಕಟ್ಟಿನಹೊಳೆ ಮೂಲಕ ಕೊಡಚಾದ್ರಿಗೆ ತೆರಳುವ ಜೀಪ್ ಮುಂತಾದ ವಾಹನಗಳು ಹಾಗೂ ವಿವಿಧ ಮಾರ್ಗದ ಮೂಲಕ ಚಾರಣಕ್ಕೆ ಹೋಗುವವರಿಗೆ ನಿಷೇಧಿಸಲಾಗಿದೆ.
ಈ ಮೂಲಕ ನಿಟ್ಟೂರು, ಸಂಪೆಕಟ್ಟೆ, ಕಟ್ಟಿನಹೊಳೆಯಿಂದ ಪ್ರತೀ ದಿನ ಕೊಡಚಾದ್ರಿಗೆ ಜೀಪ್‌ನಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಸುಮಾರು 150 ಜೀಪ್ ಮಾಲೀಕರು, ಚಾಲಕರ ಜೀವನ ನಿರ್ವಹಣೆಗೆ ಪೆಟ್ಟು ಬಿದ್ದಂತಾಗಿದೆ.