ಹೊಸದಿಲ್ಲಿ: ಕ್ರಿಕೆಟ್ ಅಂಗಣದಲ್ಲಿ ರನ್ ಹೊಳೆ ಹರಿಸುವ ಮೂಲಕ ಈಗಾಗಲೇ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಆದಾಯದ ವಿಷಯದಲ್ಲಿಯೂ ತಾವು ಕಿಂಗ್ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಜಾಗತಿಕ ಕ್ರಿಕೆಟ್ ಹಾಗೂ ಭಾರತೀಯ ಕ್ರೀಡಾಪಟುಗಳ ಪೈಕಿ ಕೊಹ್ಲಿ ಅತಿ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದುವ ಮೂಲಕ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಇಡೀ ದೇಶದಲ್ಲಿಯೇ ಅತಿ ಹೆಚ್ಚಿನ ಫಾಲೋವರ್ಸ್ ಅನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ. ಆದರೆ, ಅತ್ಯಂತ ಹೆಚ್ಚು ಆದಾಯ ಗಳಿಸುತ್ತಿರುವ ಏಷ್ಯಾ ಕ್ರೀಡಾಪಟುಗಳ ಸಾಲಿನಲ್ಲಿ ವಿರಾಟ್ ಕೊಹ್ಲಿಗೆ ಎರಡನೇ ಸ್ಥಾನ ಎಂದರೆ ನಂಬುತ್ತೀರಾ?
ಹೌದು, ನಂಬಲೇಬೇಕು? ಏಷ್ಯಾದಲ್ಲಿ ಅತಿ ಹೆಚ್ಚು ಆದಾಯ ಹೊಂದಿರುವ ಕ್ರೀಡಾಪಟುಗಳ ಸಾಲಿನಲ್ಲಿ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕಿಂಗ್ ಕೊಹ್ಲಿ ವಾರ್ಷಿಕವಾಗಿ 33.3 ದಶಲಕ್ಷ ಡಾಲರ್ ಹಣವನ್ನು ಗಳಿಸುತ್ತಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಆದಾಯ ಹೊಂದಿದ್ದರೂ ಕೊಹ್ಲಿ ಏಷ್ಯಾ ಕ್ರೀಡಾಪಟುಗಳ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ.
ಕ್ರಿಕೆಟ್ ಆಡುವ ಮೂಲಕ ವಿರಾಟ್ ಕೊಹ್ಲಿ ವಾರ್ಷಿಕವಾಗಿ 2.8 ದಶಲಕ್ಷ ಡಾಲರ್ ಆದಾಯ ಗಳಿಸುತ್ತಿದ್ದರೆ, ವಾಣಿಜ್ಯ ಅನುಮೋದನೆಗಳಿಂದಾಗಿ ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್ ಬರೋಬ್ಬರಿ 31 ದಶಲಕ್ಷ ಡಾಲರ್ ಅನ್ನು ಜೇಬಿಗಿಳಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಭಾರತ ಕ್ರಿಕೆಟ್ ತಂಡದ ಆಟಗಾರರ ಪೈಕಿ ಕೊಹ್ಲಿ ಅತ್ಯಂತ ಹೆಚ್ಚಿನ ಆದಾಯವನ್ನು ಹೊಂದಿದ್ದಾರೆ.
ಏಷ್ಯಾಗೆ ನಂ.1 ನಯೋಮಿ ಒಸಾಕಾ
ವಿಶ್ವದ ಸ್ಟಾರ್ ಟೆನಿಸ್ ಆಟಗಾರ್ತಿ ಜಪಾನ್‌ನ ನಯೋಮಿ ಒಸಾಕಾ ಅವರು ವಾರ್ಷಿಕವಾಗಿ ಅತಿ ಹೆಚ್ಚು ಆದಾಯವನ್ನು ಹೊಂದಿದ್ದಾರೆಂದು ಸ್ಪೋರ್ಟಿಕೊ ಸಂಸ್ಥೆ ಇತ್ತೀಚೆಗೆ ಬಹಿರಂಗಪಡಿಸಿದೆ. ಕಳೆದ 2022ರಲ್ಲಿ ನಯೋಮಿ ಒಸಾಕಾ ಅವರು ಬರೋಬ್ಬರಿ 53.2 ದಶಲಕ್ಷ ಡಾಲರ್ ಆದಾಯವನ್ನು ಗಳಿಸಿದ್ದರು. ವಾಣಿಜ್ಯ ಅನುಮೋದನೆಗಳಿಂದ 52 ದಶಲಕ್ಷ ಡಾಲರ್ ಪಡೆದರೆ, ಟೆನಿಸ್ ಆಟದಿಂದ ಬರುವ ಪ್ರಶಸ್ತಿಗಳಿಂದ 1.2 ದಶಲಕ್ಷ ಡಾಲರ್ ಗಳಿಸುತ್ತಿದ್ದಾರೆ.