Spread the love

ಸಾಗರ: ಶಾಸಕರಾಗಿದ್ದಾಗ ಹಾಲಪ್ಪ ಹರತಾಳು ರೈತರಿಗೆ ಸಾಗುವಳಿ ಚೀಟಿ ಕೊಡದೆ ಈಗ ನನ್ನ ಮೇಲೆ ತಪ್ಪು ಅಭಿಪ್ರಾಯ ಬರುವಂತೆ ಮಾಡಿರುವುದು ಅವರಿಗೆ ಶೋಭೆ ತರುವುದಿಲ್ಲ. ಮಡಸೂರು ಗ್ರಾಮದ ಏಳು ಜನ ರೈತರು ಜೈಲಿಗೆ ಹೋಗಿರುವುದಕ್ಕೆ ನಾನೇ ಕಾರಣ ಎನ್ನುವ ರೀತಿಯಲ್ಲಿ ಅವರುನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಿಡಿಕಾರಿದ್ದಾರೆ.

ಭಾನುವಾರ ಮಡಸೂರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದ ಅವರು, ರೈತರನ್ನು ಜೈಲಿಗೆ ಕಳಿಸಿರುವುದು ನನಗೆ ತಡವಾಗಿ ಗೊತ್ತಾಯಿತು. ವಿಷಯ ಗೊತ್ತಾದ ತಕ್ಷಣ ಶಾಸಕ ಗೋಪಾಲಕೃಷ್ಣ ಬೇಳೂರಿಗೆ ಫೋನ್ ಮಾಡಿ ರೈತರ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ನಾನು ಸಚಿವನಾಗಿದ್ದ ಸಂದರ್ಭದಲ್ಲಿಯೇ ಮಡಸೂರು ಗ್ರಾಮದ ರೈತರಿಗೆ ಭೂಮಿ ಮಂಜೂರು ಮಾಡಿಸಿದ್ದೇನೆ. ಅವರು ಸಾಗುವಳಿ ಚೀಟಿ ಪಡೆಯದೆ ಇರುವುದು ನನಗೆ ಗೊತ್ತಿಲ್ಲ. ಈಚೆಗೆ ಅಧಿಕಾರಿಗಳು ಗ್ರಾಮಕ್ಕೆ ಹೋದಾಗ ಸಣ್ಣಪುಟ್ಟ ಮಾತಿನ ಚಕಮಕಿ ನಡೆದಿದೆ. ಅಧಿಕಾರಿಗಳ ಮೇಲೆ ಕೊಲೆಯತ್ನ ನಡೆದಿಲ್ಲ. ಒಬ್ಬ ರೈತ ಗಲಾಟೆ ನಡುವೆ ಕತ್ತಿ ತಾಗಬಹುದು ಎಂದು ಸೊಂಟದಲ್ಲಿದ್ದ ಕತ್ತಿಯನ್ನು ತೆಗೆದು ಕೈನಲ್ಲಿ ಇರಿಸಿಕೊಂಡಿದ್ದಾನೆ ಎನ್ನಲಾಗಿದೆ. ಆಗ ತಹಶೀಲ್ದಾರ್ ಜನರಿಂದ ಸಾಕಷ್ಟು ದೂರದಲ್ಲಿದ್ದರು. ಎಲ್ಲೋ ತಪ್ಪು ಭಾವನೆಯಿಂದ ದೂರು ದಾಖಲಾಗಿರಬಹುದು. 7 ಜನ ರೈತರು 13 ದಿನದಿಂದ ಜೈಲಿನಲ್ಲಿದ್ದಾರೆ. ಬಹುಶಃ ನಾಳೆ ರೈತರು ಹೊರಗೆ ಬರಬಹುದು. ಪ್ರಕರಣ ದಾಖಲಾಗಿರುವುದರಿಂದ ಸರ್ಕಾರದ ಹಂತದಲ್ಲಿ ರೈತರ ಮೇಲೆ ಹಾಕಿರುವ ಕೇಸ್ ಹಿಂದಕ್ಕೆ ತೆಗೆಸಲು ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದರು.

ಹಾಲಪ್ಪ ಅಧಿಕಾರದಲ್ಲಿದ್ದಾಗ ನಾನು ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಮಾಡಬೇಕಾದ ಕೆಲಸ ಮಾಡದೆ ಈಗ ನನ್ನನ್ನು ಪ್ರಕರಣದಲ್ಲಿ ಎಳೆದು ತರುವುದು ಸರಿಯಲ್ಲ. ಇಂತಹ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳದೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಎಲ್ಲರೂ ಸೇರಿ ಮಾಡಬೇಕು. ಅದನ್ನು ಬಿಟ್ಟು ಬೇರೆಯವರ ಕಡೆ ಬೊಟ್ಟು ತೋರಿಸಬಾರದು ಎಂದು ಅವರು ಹೇಳಿದರು.

 

Leave a Reply

Your email address will not be published. Required fields are marked *