ಹೊಸದಿಲ್ಲಿ: ವಾರಕ್ಕೆ ಐದು ದಿನಗಳ ಕೆಲಸ, ಎರಡು ವಾರದ ರಜೆ (ವೀಕ್ ಆಫ್), ಸಂಬಳ ಹೆಚ್ಚಳ ಮತ್ತು ನಿವೃತ್ತ ವೇತನದಾರರಿಗೆ ಗ್ರೂಪ್ ಮೆಡಿಕಲ್ ಇನ್ಷೂರೆನ್ಸ್ ಪಾಲಿಸಿ – ಇವೂ ಸೇರಿದಂತೆ ಬ್ಯಾಂಕ್ ಉದ್ಯೋಗಿಗಳ ಬಹುದಿನಗಳ ಬೇಡಿಕೆಗಳ ಬಗ್ಗೆ ಭಾರತೀಯ ಬ್ಯಾಂಕಿಂಗ್ ಸಂಸ್ಥೆ (ಐಬಿಎ) ಜು.28ರಂದು ತೀರ್ಮಾನ ಪ್ರಕಟಿಸುವ ನಿರೀಕ್ಷೆ ಇದೆ.
ಬ್ಯಾಂಕ್ ನೌಕರರ ಸಂಘಟನೆ ಮತ್ತು ಭಾರತೀಯ ಬ್ಯಾಂಕಿಂಗ್ ಸಂಸ್ಥೆ ನಡುವಿನ ಮೊದಲ ಸಭೆ ಜುಲೈ 28ರಂದು ನಡೆಯಲಿದೆ. ಒಂದು ವೇಳೆ ಬೇಡಿಕೆಗಳಿಗೆ ಐಬಿಎ ಅನುಮೋದನೆ ನೀಡಿದರೆ, ನಾನಾ ಸೌಲಭ್ಯಗಳು ಬ್ಯಾಂಕ್ ಉದ್ಯೋಗಿಗಳಿಗೆ ಸಿಗಲಿವೆ.
“ಹಿಂದಿನ ಚರ್ಚೆಯಲ್ಲಿ ಬ್ಯಾಂಕ್ ನೌಕರರ 5 ದಿನಗಳ ಕೆಲಸದ ಬೇಡಿಕೆಯನ್ನು ಚರ್ಚಿಸಲಾಗಿದೆ. ಈ ಬೇಡಿಕೆಯನ್ನು ತ್ವರಿತವಾಗಿ ಈಡೇರಿಸಲು ಭಾರತೀಯ ಬ್ಯಾಂಕಿಂಗ್ ಸಂಸ್ಥೆ ಉತ್ಸುಕವಾಗಿದೆ,” ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ಹೇಳಿದೆ.
ನಿವೃತ್ತಿ ಹೊಂದಿದ ಬ್ಯಾಂಕ್ ನೌಕರರಿಗೆ 2 ಲಕ್ಷ ರೂ.ಗಳ ಪ್ರತ್ಯೇಕ ಏಕರೂಪದ ವಿಮೆ ಪಾಲಿಸಿಯನ್ನು ಜಾರಿಗೊಳಿಸುವುದಕ್ಕೆ ಯುಎಫ್‌ಬಿಯು ಈಗಾಗಲೇ ಒಪ್ಪಿಕೊಂಡಿದೆ. ವೇತನ ಹೆಚ್ಚಳದ ಬೇಡಿಕೆಯೂ ಇದೆ.