ಶಿಕಾರಿಪುರ: ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಹಗರಣಗಳು ನಡೆದಿದೆ ಎಂಬುವ ರೀತಿಯಲ್ಲಿ ರಾಜ್ಯ ಸರ್ಕಾರ ಬಿಂಬಿಸುತ್ತಿದೆ. ಚುನಾವಣೆ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದ್ದರು, ಆದರೆ ಚುನಾವಣೆ ಮುಗಿದ ನಂತರವೂ ಅದೇ ದಾಟಿಯಲ್ಲಿ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ನಮ್ಮ ಪಕ್ಷ ಇದರ ಬಗ್ಗೆ ಹೆದರಿಕೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ. ರಾಷ್ಟ್ರೋತ್ಥಾನ ಪರಿಷತ್ ಅಡಿಯಲ್ಲಿ ಜನಸೇವಾ ವಿದ್ಯಾ ಕೇಂದ್ರ ಕಳೆದ 30 -40 ವರ್ಷಗಳಿಂದ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುತ್ತಿದೆ. ಬಡ ಮಕ್ಕಳು ಶಿಕ್ಷಣ ಪಡೆದು, ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಆದರೆ ನೂತನ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಟ್ಟ 35 ಎಕರೆ ಭೂಮಿ ಹಿಂಪಡೆಯುವ ಬಗ್ಗೆ ನಿರ್ಧಾರ ಮಾಡಿರುವುದು ದುರಂತವಾಗಿದೆ. ಶಿಕ್ಷಣ ಕ್ಷೇತ್ರದ ಮೇಲೂ ಈ ಸರ್ಕಾರದ ವಕ್ರ ದೃಷ್ಟಿ ಬೀರಿದೆ. ಇದು ಸಚಿವರಿಗೆ, ಮುಖ್ಯಮಂತ್ರಿ ಅವರಿಗೆ ಶೋಭೆ ತರುವಂತಹದಲ್ಲ, ವಿನಾಕಾರಣ ದ್ವೇಷದ ರಾಜಕಾರಣ ಮಾಡಬಾರದು ಎಂದರು.
ಸಚಿವ ಮಧು ಬಂಗಾರಪ್ಪ ಹೇಳಿಕೆ ದುರಹಂಕಾರದ ಪರಮಾವಧಿಯಾಗಿದೆ. 136 ಸೀಟು ಬಂದಿದೆ ಅಂತಾ ಆನೆ ನಡೆದಿದ್ದೇ ದಾರಿ ಎಂಬಂತೆ ಸಚಿವರು, ಶಾಸಕರು ವರ್ತಿಸುತ್ತಿದ್ದಾರೆ. ಇದಕ್ಕೆ ಉತ್ತರ ಸದನದ ಒಳಗೆ ಹೊರಗೆ ಕೊಡುತ್ತೇವೆ. ಅಧಿಕಾರ ಯಾವುದು ಶಾಶ್ವತ ಅಲ್ಲ, ಅಧಿಕಾರ ಎನ್ನುವುದು ಶಾಶ್ವತ ಅಲ್ಲ. ಈ ರೀತಿಯ ದೌರ್ಜನ್ಯ, ದಬ್ಬಾಳಿಕೆ ಮೆಟ್ಟಿ ನಿಲ್ಲುವಂತಹ ಶಕ್ತಿ ಬಿಜೆಪಿಗೆ ಇದೆ. ನಾವು ಅಧಿಕಾರಕ್ಕೆ ಬಂದಿಲ್ಲ ನಿಜ, ನಮ್ಮನ್ನು ರಾಜ್ಯದ ಜನ ಅಧಿಕೃತ ವಿರೋಧ ಪಕ್ಷದ ಸ್ಥಾನಕ್ಕೆ ಕೂರಿಸಿದೆ. ಹಾಗಂತ ಮನಸೋ ಇಚ್ಚೆ ಆಡಳಿತ ಪಕ್ಷಕ್ಕೆ ಆಡಳಿತ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.