ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಧನದಿಂದ ಬಿಜೆಪಿ ವಿರುದ್ಧ ಆಪ್ ಕೆಂಡ ಕಾರುತ್ತಿದೆ. ಮನೀಶ್ ಸಿಸೋಡಿಯಾ ಬಂಧನದ ಹಿಂದೆ ಬಿಜೆಪಿ ಷಡ್ಯಂತ್ರವಿದೆ ಎಂದು ಆಪ್ ಮುಖಂಡರು ಕಿಡಿಕಾರಿದ್ದಾರೆ. ಸಿಸೋಡಿಯಾ ಬಂಧನ ವಿರೋಧಿಸಿ ಆಪ್ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು ಭಾರತ್ ಬಂದ್‌ಗೂ ಒತ್ತಾಯಿಸಿದೆ.
ಅದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಆಪ್ ಶಾಸಕ ಸಂಜಯ್ ಸಿಂಗ್,ʻ ಸಿಬಿಐ, ಇಡಿಯ ಅಧಿಕಾರ ನನ್ನ ಕೈಗೆ ಕೊಡಿ. ಕೇವಲ 2 ಗಂಟೆಯಲ್ಲಿ ನಾನು ಮೋದಿ, ಅಮಿತ್ ಶಾ, ಅದಾನಿ ಅವರನ್ನು ಬಂಧಿಸುತ್ತೇನೆʼ ಎಂದು ಹೇಳಿದ್ದಾರೆ.
ಸಿಸೋಡಿಯಾ ಬೆಂಬಲಿಸಿ ಸಿಬಿಐ ಕಛೇರಿ ಎದುರು ಪ್ರತಿಭಟಿಸಿದ್ದಕ್ಕಾಗಿ ಪಕ್ಷದ ಇತರೆ ಮುಖಂಡರೊಂದಿಗೆ ಬಂಧನಕ್ಕೊಳಗಾಗಿ ಬಿಡುಗಡೆಯಾದ ಸಂಜಯ್ ಸಿಂಗ್, ʻಬಿಜೆಪಿ , ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವುದಕ್ಕೆ ಈ ರೀತಿಯ ಕೆಲಸ ಮಾಡುತ್ತಿದೆʼ ಎಂದು ಆರೋಪಿಸಿದ್ದಾರೆ.
ಅಲ್ಲದೇ, ʻನರೇಂದ್ರ ಮೋದಿಯ ಸರ್ವಾಧಿಕಾರ ಶೀಘ್ರವೇ ಕೊನೆಯಾಗಲಿದೆ. ಅವರು ದೇಶದ ಒಬ್ಬ ಉತ್ತಮ ಶಿಕ್ಷಣ ಸಚಿವನನ್ನು ಬಂಧಿಸಿದ್ದಾರೆ. ಇದು ಕೇಂದ್ರ ಸರ್ಕಾರದ ಹೇಡಿತನದ ನಡೆʼ ಎಂದು ಹೇಳಿದ್ದಾರೆ.