ಉತ್ತರ ಪ್ರದೇಶ: ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಗ್ರಾಹಕರ ನಿದ್ದೆಗೆಡಿಸಿದೆ. ಜನರು ಟೊಮೆಟೋ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಟೊಮೆಟೋ ಬೆಳೆದ ರೈತನಿಗೆ ಮಾತ್ರ ಜ್ಯಾಕ್ ಪಾಟ್ ಹೊಡೆದಿದೆ. ವೆಜ್ ಆಗಿರಲಿ, ನಾನ್ ವೆಜ್ ಆಗಿರಲಿ ಬಹುತೇಕ ಎಲ್ಲಾ ಅಡುಗೆಗೆ ಟೊಮೆಟೋ ಬೇಕೇ ಬೇಕೆ. ಆದರೆ ಈಗ ಟೊಮೆಟೋ ಬೆಲೆ ಗಗನಕ್ಕೇರಿದ್ದು, ಮತ್ತಷ್ಟು ಹುಳಿ ಹುಳಿಯಾಗಿದೆ. ಸದ್ಯ ಟೊಮೆಟೋಗೆ ಮಾರುಕಟ್ಟೆಯಲ್ಲಿ ಬಂಗಾರ ಬಲೆ ಬಂದಿದ್ದು, ಇದನ್ನು ಕಾಯಲೆಂದೇ ಉತ್ತರ ಪ್ರದೇಶದ ವಾರಣಾಸಿಯ ತರಕಾರಿ ಮಾರಾಟಗಾರರೊಬ್ಬರು ಬೌನ್ಸರ್ಸ್ (bouncer) ಗಳನ್ನು ನೇಮಿಸಿಕೊಂಡಿದ್ದಾರೆ.
ಹೌದು ಪಿಟಿಐ ಈ ಕುರಿತಾಗಿ ವರದಿ ಮಾಡಿದೆ. ದೇಶದಾದ್ಯಂತ ಟೊಮೆಟೋ ಬೆಲೆ ಹೆಚ್ಚಾಗಿದೆ. ಹಾಗಾಗಿ ಖರೀದಿಸುವ ಬದಲು ಜನರು ಕಳ್ಳತನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ತೊಂದರೆ ನೀಡುತ್ತಿದ್ದಾರೆ. ಹಾಗಾಗಿ ನಾನು ಬೌನ್ಸರ್ಸ್ಗಳನ್ನು ನೇಮಿಸಿಕೊಂಡಿದ್ದೇನೆ. ನನ್ನ ಅಂಗಡಿಯಲ್ಲಿ ಟೊಮೆಟೋಗಳಿವೆ. ನಾನು ಗ್ರಾಹಕರೊಂದಿಗೆ ಯಾವುದೇ ವಾದ ಅಥವಾ ಜಗಳ ಮಾಡಲು ಬಯಸುವುದಿಲ್ಲ. ಟೊಮೆಟೋ 160 ರೂ. ಕೆಜಿ ಗೆ ಮಾರಾಟವಾಗುತ್ತಿದೆ. ಜನರು 50 ಅಥವಾ 100 ಗ್ರಾಂ ಖರೀದಿಸುತ್ತಿದ್ದಾರೆ ಎಂದು ತರಕಾರಿ ಮಾರಾಟಗಾರ ಅಜಯ್ ಫೌಜಿ ಪಿಟಿಐಗೆ ತಿಳಿಸಿದ್ದಾರೆ.
ಇತ್ತೀಚೆಗೆ ಕರ್ನಾಟಕದ ಕೋಲಾರ, ಹಾಸನ ಜಿಲ್ಲೆಗಳಲ್ಲಿ ಕೂಡ ರೈತರು ಕಷ್ಟಪಟ್ಟು ಬೆಳೆದ ಟೊಮೆಟೋ ಗಳನ್ನು ಕಳ್ಳತನ ಮಾಡಿದ್ದರು. ಇದನ್ನು ತಡೆಗಟ್ಟಲು ರೈತರು ಗಂಭೀರ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ವರದಿಯಾಗಿತ್ತು.