ಮಂಗಳೂರು: ಶಾಲಾ ಮಕ್ಕಳ ಬ್ಯಾಗ್ ಹೊರೆ ಬಗ್ಗೆ ಎಷ್ಟೇ ಧ್ವನಿಯೆತ್ತಿದರೂ, ಸರಕಾರ ನಿಯಮ ತಂದರೂ ಪರಿಸ್ಥಿತಿ ವರ್ಷದಿಂದ ವರ್ಷಕ್ಕೆ ಬಿಗಡಾಯಿಸುತ್ತಿದೆಯೇ ಹೊರತು ಸುಧಾರಿಸುತ್ತಿಲ್ಲ. ಇದರ ಒಟ್ಟಾರೆ ಪರಿಣಾಮ ಮಕ್ಕಳ ಮೇಲಾಗುತ್ತಿರುವುದು ನಿಜ. ಇದೀಗ ಶಾಲಾ ಬ್ಯಾಗ್ ಭಾರ ತಾಳಲಾರದೆ 1ನೇ ತರಗತಿ ಬಾಲಕಿಯೊಬ್ಬಳು ಕುಸಿದು ಬಿದ್ದು ಗಾಯಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಮುಡಿಪು ಎಂಬಲ್ಲಿ ನಡೆದಿದೆ.
1ನೇ ತರಗತಿ ಮಗುವಿಗೆ ಎಷ್ಟು ಅಗತ್ಯವೋ ಅಷ್ಟು ಪುಸ್ತಕಗಳು ಮತ್ತು ಸಾಮಗ್ರಿಗಳು ಚೀಲದೊಳಗಿದ್ದಿದ್ದರೆ ಬಾಲಕಿ ಬೀಳುವ ಪ್ರಶ್ನೆ ಇರುತ್ತಿರಲಿಲ್ಲ. ಈದರೆ ಆಕೆಯ ಬೆನ್ನಲ್ಲಿದ್ದ ಚೀಲದಲ್ಲಿ 19 ಪುಸ್ತಕಗಳಿದ್ದು ಒಟ್ಟು 12 ಕೆಜಿ ತೂಗುತ್ತಿತ್ತು! ಸ್ಥಳೀಯ ಖಾಸಗಿ ಶಾಲೆಯ ವಿದ್ಯಾರ್ಥಿನಿಯಾಗಿರುವ ಆಕೆ ಇಂಟರ್ ಲಾಕ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಿದ್ದು ಆಕೆಯ ಮೂಗಿಗೆ ಗಾಯವಾಗಿದೆ. ಈ ದೃಶ್ಯದ ಸಿಸಿ ಟಿವಿ ಫೂಟೇಜ್ ಸಿಕ್ಕಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದೆ.
ಈ ದೃಶ್ಯವನ್ನು ಗಮನಿಸಿದಾಗ ಆಕೆ ಮಳೆ ಬರುತ್ತಿದ್ದ ವೇಳೆ ನಡೆದುಕೊಂಡು ಹೋಗುತ್ತಿದ್ದಾಗ ಆಕೆ ಕಾಲುಜಾರಿ ಬಿದ್ದ ಹಾಗೆ ಕಾಣಿಸುತ್ತಿದೆ. ಆದರೆ ಏನೇ ಆಗಿದ್ದರೂ ಆಕೆ ಭಾರವಾದ ಬ್ಯಾಗ್ ಅನ್ನು ಹೊತ್ತುಕೊಂಡು ನಡೆಯಲು ಕಷ್ಟಪಡುತ್ತಿದ್ದುದಂತೂ ನಿಜ. ಸ್ಥಳದಲ್ಲಿದ್ದವರು ಬ್ಯಾಗ್ ಅನ್ನು ಪರಿಶೀಲಿಸಿದಾಗ ಬ್ಯಾಗ್ ಬಹಳ ಭಾರವಾಗಿದ್ದುದು ಗಮನಕ್ಕೆ ಬಂದಿದೆ.
ಒಂದು ಮಗು ಎಷ್ಟು ಭಾರ ಹೊರಬಹುದು?
ಶಿಕ್ಷಣ ಇಲಾಖೆ ಶಾಲಾ ಬ್ಯಾಗ್ ಹೊರೆ ತಗ್ಗಿಸಲು ಕ್ರಮ ವಹಿಸುವಂತೆ ಸುತ್ತೋಲೆ ಹೊರಡಿಸಿದ್ದು, ಹಳೇ ವರದಿ ಪ್ರಕಾರವೇ ಬ್ಯಾಗ್ ತೂಕ ನಿಗದಿ ಮಾಡಬೇಕೆಂದು ಶಾಲೆಗಳಿಗೆ ಸೂಚನೆ ನೀಡಿತ್ತು. ಆ ಪ್ರಕಾರ 1ರಿಂದ 10ನೇ ತರಗತಿಯವರೆಗೆ ಶಾಲಾ ಬ್ಯಾಗ್ ತೂಕ ಇಷ್ಟೇ . 1ರಿಂದ 2ನೇ ತರಗತಿಗೆ 1.5 ರಿಂದ 2 ಕೆ.ಜಿ, 3 ರಿಂದ 5 ನೇ ತರಗತಿಗೆ 2ರಿಂದ 3 ಕೆ.ಜಿ, 6 ರಿಂದ 8 ನೇ ತರಗತಿಗೆ 3ರಿಂದ 4 ಕೆ.ಜಿ, 9ರಿಂದ 10ನೇ ತರಗತಿಗೆ 4ರಿಂದ 5 ಕೆ.ಜಿ. ನಿಗದಿ ಮಾಡಿದೆ. 1 ಮತ್ತು 2ನೇ ತರಗತಿ ಶಿಕ್ಷಣವು ಬೋಧನೆಯ ಬುನಾದಿ ಹಂತವಾಗಿರುವುದರಿಂದ ಮಕ್ಕಳಿಗೆ ಶಾಲೆಗಳಲ್ಲಿಯೇ ಚಟುವಟಿಕೆ ಮೂಲಕ ಕಲಿಯಲು ಆದ್ಯತೆ ನೀಡಬೇಕು. ಅವರಿಗೆ ಹೋಮ್ ವರ್ಕ್ ಎಂದು ನೀಡಿ ಸುಮ್ಮನೇ ಒತ್ತಡ ಹೇರಬಾರದು ಎಂದೂ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿತ್ತು.