Spread the love

ಬೆಂಗಳೂರು: ನಿವೇಶನ ಕೊಡಿಸುವುದಾಗಿ ನಂಬಿಸಿ ರಿಯಲ್ ಎಸ್ಟೇಟ್ ಸಂಸ್ಥೆಯ ಮಾಲೀಕ ಹಾಗೂ ಮತ್ತೊಬ್ಬ ವ್ಯಕ್ತಿಯು 18.5 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಕನ್ನಡದ ನಟ ಮಾಸ್ಟರ್ ಆನಂದ್ ಹೆಚ್ ಪೊಲೀಸರಿಗೆ ದೂರು ನೀಡಿದ್ದಾರೆ.

ಮಲ್ಟಿ ಲೀಪ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಮಾಲೀಕ ಸುಧೀರ್ ಎಸ್ ಮತ್ತು ಅವರ ಆಪ್ತ ಸಹಾಯಕಿ ಮಣಿಕಾ ಕೆಎಂ ವಿರುದ್ಧ ನಟ ಮಾಸ್ಟರ್ ಆನಂದ್ ಜೂನ್ 23 ರಂದು ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೆಂಗೇರಿಯ ಕೊಮ್ಮಘಟ್ಟದಲ್ಲಿ ಗೇಟೆಡ್ ಕಮ್ಯುನಿಟಿಯಲ್ಲಿ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದು, ಮುಂಗಡವಾಗಿ 18.5 ಲಕ್ಷ ರೂ. ಪಾವತಿಸಿರುವುದಾಗಿ ಆನಂದ್ ಹೇಳಿದ್ದಾರೆ.

ಎಫ್‌ಐಆರ್ ಪ್ರಕಾರ, ಆನಂದ್ ಅವರು ಜುಲೈ 2020 ರಲ್ಲಿ ಚಲನಚಿತ್ರ ಚಿತ್ರೀಕರಣಕ್ಕಾಗಿ ಕೊಮ್ಮಘಟ್ಟದ ರಾಮಸಂದ್ರಕ್ಕೆ ಭೇಟಿ ನೀಡಿದಾಗ ‘ಮಾರಾಟಕ್ಕಿವೆ’ ಎಂಬ ಫಲಕಗಳೊಂದಿಗೆ ಖಾಲಿ ನಿವೇಶನಗಳನ್ನು ನೋಡಿದ್ದಾರೆ.

ಈ ವೇಳೆ ಅವರ ವಿಚಾರಣೆಗೆ ಪ್ರತಿಕ್ರಿಯೆಯಾಗಿ, ಸಂಸ್ಥೆಯ ಮಾರ್ಕೆಟಿಂಗ್ ಕಛೇರಿಯಲ್ಲಿ  ಮಣಿಕಾ ಮತ್ತು ಸುಧೀರ್ ಎಂಬುವವರು ಆನಂದ್ ಅವರಿಗೆ ಎಲ್ಲಾ ವಿವರಗಳನ್ನು ನೀಡಿದ್ದಾರೆ ಮತ್ತು ಕೊಡುಗೆಗಳನ್ನು ವಿವರಿಸಿದ್ದಾರೆ. ಆನಂದ್ ತಾನು ಈ ಬಗ್ಗೆ ನಿರ್ಧಾರ ತೆಗೆದುಕೊಂಡು ಹಿಂದಿರುವುದಾಗಿ ತಿಳಿಸಿ ಅಲ್ಲಿಂದ ಹೊರಟಿದ್ದಾರೆ.

ಆದರೆ, ಮಣಿಕಾ ಮತ್ತು ಸುಧೀರ್ ಅವರಿಗೆ ಕರೆ ಮಾಡಿ ಅತ್ಯಾಕರ್ಷಕ ಸಾಲ ಯೋಜನೆಗಳ ಆಮಿಷ ಒಡ್ಡಿದ್ದಾರೆ. ಈ ಆಫರ್‌ನಿಂದ ಆಕರ್ಷಿತರಾದ ಅವರು ನಿವೇಶನ ಖರೀದಿಸಲು ಒಪ್ಪಿಕೊಂಡಿದ್ದಾರೆ. ಮಾತುಕತೆಯ ನಂತರ 70 ಲಕ್ಷ ರೂ.ಗೆ ಒಪ್ಪಂದವನ್ನು ಅಂತಿಮಗೊಳಿಸಲಾಯಿತು ಮತ್ತು ಖರೀದಿ ಕರಾರು ಪತ್ರವನ್ನು ನೀಡಲಾಯಿತು.

ಸೆಪ್ಟೆಂಬರ್ 2020 ಮತ್ತು ನವೆಂಬರ್ 2020 ರ ನಡುವೆ, ನಟ ಅವರಿಗೆ ನಾಲ್ಕು ಕಂತುಗಳಲ್ಲಿ 18.5 ಲಕ್ಷ ರೂ. ನೀಡಿದ್ದಾರೆ. ಒಪ್ಪಂದದಲ್ಲಿ ನಮೂದಿಸಿರುವ ಬಾಕಿ ಪಾವತಿಗೆ ಸುಧೀರ್ ಅವರು ಸಾಲ ಮಂಜೂರು ಮಾಡುವುದನ್ನೇ ಅವರು ಕಾಯುತ್ತಿದ್ದರು. ಆದರೆ, ಸುಧೀರ್ ಸಾಲ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ನಂತರ ಆ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಿರುವುದು ತಿಳಿದುಬಂದಿದೆ ಎಂದು ಆನಂದ್ ಆರೋಪಿಸಿದ್ದಾರೆ.

ಪೊಲೀಸರು ಐಪಿಸಿಯ ವಿವಿಧ ಸೆಕ್ಷನ್‌ಗಳು ಮತ್ತು ನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ, 2019 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ತನಿಖೆಯನ್ನು ಪ್ರಾರಂಭಿಸಿದ್ದಾರೆ.

Leave a Reply

Your email address will not be published. Required fields are marked *