Spread the love

ಶಿವಮೊಗ್ಗ: ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಗಳ ಆವರಣದಿಂದ ಆಯೋಜಿಸಿದ್ದ ರಕ್ತದಾನ ಜಾಗೃತಿ ಜಾಥಾವನ್ನು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಉದ್ಘಾಟಿಸಿದರು. ಆರೋಗ್ಯವಂತ ಯುವಜನತೆ ರಕ್ತದಾನ ಮಾಡಬೇಕು ಎನ್ನುವ ಜಾಗೃತಿ ಮೂಡಿಸಲಾಯಿತು.

ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತು ನಿಯಂತ್ರಣ ಘಟಕದ ವತಿಯಿಂದ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತದ ಜಾಗೃತಿ ಜಾಥಾದಲ್ಲಿ “ರಕ್ತ ನೀಡಿ, ಪ್ಲಾಸ್ಮಾ ನೀಡಿ, ಜೀವನ ಹಂಚಿಕೊಳ್ಳಿ” ಘೋಷವಾಕ್ಯ ಹಾಗೂ ರಕ್ತದಾನದ ಮಹತ್ವದ ಬಗ್ಗೆ ಘೋಷಣೆಗಳನ್ನು ಜಾಗೃತಿ ಜಾಥಾದಲ್ಲಿ ಪ್ರದರ್ಶಿಸಲಾಯಿತು.

ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತವನ್ನು ಮನುಷ್ಯರ ದಾನದಿಂದ ಮಾತ್ರ ಪಡೆಯಬಹುದು. ರಕ್ತದಾನ ಮಾಡುವುದು ಪ್ರತೀ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವೆಂದು ಭಾವಿಸಿ ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ರೋಗಗ್ರಸ್ಥರು ಮತ್ತು ಗಾಯಗೊಂಡವರನ್ನು ಬದುಕಿಸಲು ಸಾಧ್ಯ. ರಕ್ತದಾನ ಮಾಡಿದ ದಾನಿಯ ದೇಹದಲ್ಲಿ ರಕ್ತದ ಉತ್ಪತ್ತಿ ಪ್ರಾರಂಭವಾಗಿ 24 ಗಂಟೆಯ ಒಳಗಾಗಿ ದಾನ ಮಾಡಿದ ಪ್ರಮಾಣದ ರಕ್ತ ದೇಹದಲ್ಲಿ ಪುನರುತ್ಪತ್ತಿಯಾಗುತ್ತದೆ.

ಹೆಣ್ಣು ಗಂಡೆಂಬ ಬೇಧವಿಲ್ಲದೇ 18 ರಿಂದ 60 ವರ್ಷದ ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಗಂಡಸರು 3 ತಿಂಗಳಿಗೊಮ್ಮೆ ಮತ್ತು ಹೆಂಗಸರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ದಾನಿಯ ದೇಹದ ತೂಕ 45 ಕೆ.ಜಿ ಗಿಂತ ಹೆಚ್ಚಿರಬೇಕು. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ ಗಿಂತ ಹೆಚ್ಚಿರಬೇಕು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ಡಾ. ದಿನೇಶ್, ಡಾ. ಗುಡದಪ್ಪ ಕಸಬಿ, ಡಾ. ಚಂದ್ರಶೇಖರ್, ಐಎಂಎ ಅಧ್ಯಕ್ಷ ಡಾ. ಅರುಣ್, ಮಂಗಳ, ಆರ್.ಗಿರೀಶ್, ಮಂಜುನಾಥ ಅಪ್ಪಾಜಿ, ಜಿ.ವಿಜಯ್‌ಕುಮಾರ್, ಪ್ರಶಾಂತ್, ಡಾ. ಸಿದ್ದನಗೌಡ ಪಾಟೀಲ್, ಅತ್ತರ, ನೆಹರು ಯುವಕೇಂದ್ರದ ಉಲ್ಲಾಸ್ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *