ಇಂಪಾಲ್: ಪರೀಕ್ಷೆ ಬರೆಯಲು ಹೆಚ್ಚುವರಿ ಸಮಯವನ್ನು ನೀಡಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿಗಳು ಆಕ್ರೋಶದಿಂದ ಶಾಲೆಯನ್ನೇ ಧ್ವಂಸಗೊಳಿಸಿದ ಪ್ರಕರಣ ಮಣಿಪುರದ ತೌಬಲ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಕೌನ್ಸಿಲ್ ಆಫ್ ಹೈಯರ್ ಸೆಕೆಂಡರಿ ಎಜುಕೇಶನ್ ಮಣಿಪುರ ನಡೆಸುವ 12ನೇ ತರಗತಿಯ ಪರೀಕ್ಷೆಗೆ ಸುಮಾರು 405 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಮಣಿಪುರದ ಯೈರಿಪೋಕ್‌ನಲ್ಲಿರುವ ಎಸಿಎಂಇ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಣಿಪುರಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆಯುತ್ತಿದ್ದರು. ಇನ್ನೇನು ಸಮಯವಾಗಿ, ಕೊನೆಯ ವಾರ್ನಿಂಗ್ ಬೆಲ್ ಆಗಿದೆ. ಈ ವೇಳೆ ಕೆಲ ವಿದ್ಯಾರ್ಥಿಗಳು ಹೆಚ್ಚುವರಿ ಸಮಯವನ್ನು ನೀಡುವಂತೆ ಕೇಳಿದ್ದಾರೆ.
ಸಂಬಂಧಪಟ್ಟ ಶಿಕ್ಷಕರು ಹೆಚ್ಚುವರಿ ಸಮಯವನ್ನು ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಕೆಲ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದಾರೆ. ಶಾಲೆಯ ಕಂಪ್ಯೂಟರ್, ಸಾಮಾಗ್ರಿಗಳನ್ನು ಪುಡಿಗಟ್ಟಿ ಸಿಟ್ಟನ್ನು ಹೊರ ಹಾಕಿದ್ದಾರೆ. ಕಲ್ಲುಗಳನ್ನು ಎಸೆದು ಶಾಲೆಗೆ ಹಾನಿ ಮಾಡಿದ್ದಾರೆ. ಒಬ್ಬ ಶಿಕ್ಷಕಿ ಸೇರಿದಂತೆ 15 ವಿದ್ಯಾರ್ಥಿಗಳು ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, 8 ಮಂದಿಯನ್ನು ವಿಚಾರಣೆ ಮಾಡಿ ಅವರ ವಿರುದ್ಧ ಕೇಸ್ ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.