ವಾಷಿಂಗ್ಟನ್: ವಿಡಿಯೋ ಗೇಮ್ ಕಿತ್ತುಕೊಂಡ ಕಾರಣಕ್ಕೆ 17 ವರ್ಷದ ವಿದ್ಯಾರ್ಥಿಯೊಬ್ಬ ಶಿಕ್ಷಕಿಯನ್ನು ಅಟ್ಟಾಡಿಸಿ ಥಳಿಸಿರುವ ಘಟನೆ ಅಮೆರಿಕಾದ ಫ್ಲೋರಿಡಾದ ಹೈಸ್ಕೂಲ್ ವೊಂದರಲ್ಲಿ ನಡೆದಿದೆ.
ವಿದ್ಯಾರ್ಥಿ ತರಗತಿ ನಡೆಯುವಾಗ ವಿಡಿಯೋ ಗೇಮ್ ಬಳಸಿದ್ದಾನೆ. ಇದನ್ನು ನೋಡಿದ ಶಿಕ್ಷಕಿ ಅದನ್ನು ಆತನಿಂದ ಕಿತ್ತುಕೊಂಡಿದ್ದಾರೆ. ಆದಾದ ಬಳಿಕ ತರಗತಿಯ ಹೊರಗೆ ಹೋದ ಶಿಕ್ಷಕಿಯನ್ನು ಹಿಂದಿನಿಂದ ಬಂದು ವಿದ್ಯಾರ್ಥಿ ಕಾಲಿನಿಂದ ಒದ್ದಿದ್ದಾನೆ. ಕೆಳಗೆ ಬಿದ್ದ ಶಿಕ್ಷಕಿಯ ಮುಖಕ್ಕೆ ಹೊಡೆದು, ಥಳಿಸಿದ್ದಾನೆ. ಪರಿಣಾಮ ಶಿಕ್ಷಕಿ ಪ್ರಜ್ಞೆ ತಪ್ಪಿದ್ದಾರೆ.
ಅಕ್ಕಪಕ್ಕದಲ್ಲಿ ಜನ ಕೂಡಲೇ ಬಂದು ವಿದ್ಯಾರ್ಥಿಯನ್ನು ಬಲವಂತವಾಗಿ ಎಳೆದಿದ್ದಾರೆ. ಇಲ್ಲದಿದ್ರೆ ಶಿಕ್ಷಕಿಯನ್ನು ಆತ ಸಾಯಿಸುತ್ತಿದ್ದ ಎಂದ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಸಿಸಿಟಿವಿಯಲ್ಲಿ ಘಟನೆ ದೃಶ್ಯ ಸೆರೆಯಾಗಿದೆ.