ಬೆಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಇದೀಗ ಭರ್ತಿಯಾಗಿದ್ದು, ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಭಿನ್ನಮತ ಭುಗಿಲೆದ್ದಿದೆ. ಕಾಂಗ್ರೆಸ್ ಮುಖಂಡ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಚೇರಿ ಎದುರು ರುದ್ರಪ್ಪ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಅವರ ಬೆಂಬಲಿಗರು ಶನಿವಾರ ಪ್ರತಿಭಟನೆ ನಡೆಸಿದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ರುದ್ರಪ್ಪ ಮಾನಪ್ಪ ಲಮಾಣಿ ಗೆಲುವು ಸಾಧಿಸಿದ್ದರು.
‘ನಿನ್ನೆ ರಾತ್ರಿಯವರೆಗೂ ನಮ್ಮ ಬಂಜಾರ ಸಮಾಜದ ಮುಖಂಡ ರುದ್ರಪ್ಪ ಲಮಾಣಿ ಅವರ ಹೆಸರಿತ್ತು. ಆದರೆ, ಇಂದು ಅವರ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದನ್ನು ನೋಡಿದ್ದೇವೆ. ನಮ್ಮ ನಾಯಕನಿಗೆ ಸಚಿವ ಸ್ಥಾನ ಸಿಗದಿದ್ದರೆ, ನಾವು ಪ್ರತಿಭಟನೆ ನಡೆಸುತ್ತೇವೆ. ನಮ್ಮ ಸಮುದಾಯದ ಒಬ್ಬ ನಾಯಕನಿಗಾದರೂ ಸಚಿವ ಸ್ಥಾನ ನೀಡಬೇಕು. ಏಕೆಂದರೆ, ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶೇ 75ರಷ್ಟು ಮತ ನೀಡಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ರುದ್ರಪ್ಪ ಬೆಂಬಲಿಗರೊಬ್ಬರು ಹೇಳಿದರು.
ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಯಾರೆಲ್ಲಾ ಸೇರ್ಪಡೆಯಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಸಂಪುಟ ವಿಸ್ತರಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದ್ದು, ಇಂದು 24 ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.