ಹರಾರೆ: ಜಿಂಬಾಬ್ವೆ ವಿರುದ್ದದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಗಿಲ್ ನಾಯಕತ್ವದ ಯುವ ಟೀಮ್ ಇಂಡಿಯಾ ಆಘಾತಕಾರಿ ಸೋಲುಕಂಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ ಅಂದುಕೊಂಡಂತೆ ಭರ್ಜರಿ ಬೌಲಿಂಗ್ ಮಾಡಿ ಜಿಂಬಾಬ್ಬೆ ಆಟಗಾರರನ್ನು ಕಟ್ಟಿಹಾಕಿದರು.
ಆರಂಭದಲ್ಲೇ ಇನೋಸೆಂಟ್ ಕೈಯಾ ಅವರ ವಿಕೆಟ್ ಕಳೆದುಕೊಂಡು ಜಿಂಬಾಬ್ಬೆ ಒತ್ತಡಕ್ಕೆ ಸಿಲುಕಿತು. ಬ್ರಿಯಾನ್ ಬೆನೆಟ್ 22 ರನ್ ಗಳನ್ನು ವೇಗವಾಗಿ ಗಳಿಸಿ ರವಿ ಬಿಷ್ಣೋಯ್ ಅವರಿಗೆ ವಿಕೆಟ್ ಒಪ್ಪಿಸಿದರು. ಆರಂಭಿಕ ಮಾಧೇವೆರೆ 21 ರನ್ ಗಳಿಸಿ ಬಿಷ್ಣೋಯಿ ಸ್ಪಿನ್ ದಾಳಿಗೆ ವಿಕೆಟ್ ಒಪ್ಪಿಸಿದರು. ನಾಯಕ ಸಿಕಂದರ್ ರಾಜಾ 17 ರನ್ ಗಳ ಕೊಡುಗೆ ನೀಡಿ ಆವೇಶ್ ಖಾನ್ ಅವರ ಎಸೆತಕ್ಕೆ ಬಿಷ್ಣೋಯಿ ಅವರಿಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಕಡೆ ಸಾಗಿದರು. ಕ್ಲೈವ್ ಮದಂಡೆ ಅಂತಿಮ ಓವರ್ ಗಳಲ್ಲಿ 29 ರನ್ ಗಳಿಸಿ ಬಿರುಸಿನ ಆಟವನ್ನೀಡಿದರು.
20 ಓವರ್ ಗಳಲ್ಲಿ ಜಿಂಬಾಬ್ಬೆ 9 ವಿಕೆಟ್ ಕಳೆದುಕೊಂಡು 115 ರನ್ ಗಳಿಸಿ, 116ರ ಕನಿಷ್ಠ ಸವಾಲನ್ನು ಬಿಟ್ಟುಕೊಟ್ಟಿತು.
ಭಾರತದ ಪರವಾಗಿ ಬಿಷ್ಣೋಯಿ 4 ಪ್ರಮುಖ ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ 2 ವಿಕೆಟ್ , ಆವೇಶ್ ಖಾನ್ , ಮುಕೇಶ್ ಕುಮಾರ್ ತಲಾ 1 ವಿಕೆಟ್ ಪಡೆದರು.
ಸಣ್ಣ ಸವಾಲನ್ನು ಬೆನ್ನಟ್ಟಿದ್ದ ಭಾರತ ಆರಂಭದಲ್ಲೇ ಅಭಿಷೇಕ್ ಶರ್ಮಾ ಅವರ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಬಂದ ರುತ್ ರಾಜ್ ಗಾಯಕ್ವಾಡ್ ಕೇವಲ 7 ರನ್ ಗಳಿಸಿ ಮುಜರಬಾನಿ ಎಸೆತದಲ್ಲಿ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು.
ಒಂದು ಕಡೆ ವಿಕೆಟ್ ನಿಲ್ಲಿಸಿ ಆಟ ಆಡುತ್ತಿದ್ದ ಕ್ಯಾಪ್ಟನ್ ಗಿಲ್ ಅವರಿಗೆ ಇನ್ನೊಂದು ಕಡೆಯಿಂದ ಯಾವ ಆಟಗಾರನು ಹೆಚ್ಚು ಸಾಥ್ ನೀಡಿಲ್ಲ. ರಿಯಾನ್ ಪರಾಗ್(2 ರನ್), ರಿಂಕು ಸಿಂಗ್(0), ಧ್ರುವ್ ಜುರೆಲ್ (7 ರನ್), ರವಿ ಬಿಷ್ಣೋಯ್(9ರನ್) ಗಳಿಸಿ ಒಂದರ ಮೇಲೆ ಒಂದರಂತೆ ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲ್ಲುವ ಪಂದ್ಯವನ್ನು ಭಾರತ ಕೈಚೆಲ್ಲುವ ಹಂತಕ್ಕೆ ಬಂತು.
ವಾಷಿಂಗ್ಟನ್ ಸುಂದರ್ ಏಕಾಂಗಿಯಾಗಿ ಹೋರಾಟ ಮಾಡಿದರೂ ಅದು ಸಪಲತೆಯನ್ನು ಕಂಡಿಲ್ಲ. ಅಂತಿಮವಾಗಿ ಜಿಂಬಾಬ್ಬೆ 13 ರನ್ ಗಳ ಅಂತರದಿಂದ ಗೆದ್ದು ಬೀಗಿತು.
ಅಂತಿಮವಾಗಿ ಭಾರತ 19.5 ಓವರ್ ಗಳಲ್ಲಿ102 ರನ್ ಗಳಿಗೆ ಆಲ್ ಔಟಾಯಿತು.
ಜಿಂಬಾಬ್ಬೆ ಪರವಾಗಿ ಸಿಕಂದರ್ ರಜಾ 3 ವಿಕೆಟ್, ತೆಂಡೈ ಚತಾರಾ 3 ವಿಕೆಟ್ ಪಡೆದು ಮಿಂಚಿದರು.