ಲಕ್ನೋ(ಉತ್ತರಪ್ರದೇಶ): ಇತ್ತೀಚೆಗೆ ಉತ್ತರಪ್ರದೇಶದ ಹಾಥ್ರಸ್ ನಲ್ಲಿ ಭೋಲೆ ಬಾಬಾನ ಸತ್ಸಂಗ ಕಾರ್ಯಕ್ರಮದ ವೇಳೆ ನಡೆದ ಕಾಲ್ತುಳಿತದ ದುರಂತದಲ್ಲಿ 121 ಮಂದಿ ಸಾವಿಗೀಡಾದ ಘಟನೆ ನಂತರ ಬಾಬಾ ತಲೆಮರೆಸಿಕೊಂಡಿದ್ದು, ಏತನ್ಮಧ್ಯೆ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಭೋಲೆ ಬಾಬಾನ ಐಶಾರಾಮಿ ಜೀವನದ ಅಂಶಗಳು ಒಂದೊಂದಾಗಿಯೇ ಬಹಿರಂಗಪಡಿಸುತ್ತಿದ್ದಾರೆ.
ಭೋಲೆ ಬಾಬಾ ಅಲಿಯಾಸ್ ನಾರಾಯಣ್ ಹರಿ ಸಕಾರ್ ಕಳೆದ ಎರಡು ದಶಕಗಳಲ್ಲಿ ನೂರಾರು ಕೋಟಿ ರೂಪಾಯಿ ಆಸ್ತಿಯನ್ನು ಸಂಪಾದಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಹಾಥ್ರಸ್ ನಲ್ಲಿ ಕಾಲ್ತುಳಿತ ದುರಂತ ಸಂಭವಿಸಿದ ನಂತರ ಭೋಲೆ ಬಾಬಾ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಬಾಬಾನ ಮಂತ್ರಗಳು ತಮ್ಮ ಮನೆಯ ಜಗಳವನ್ನು ದೂರ ಮಾಡುತ್ತದೆ ಎಂಬ ನಂಬಿಕೆ ಆತನ ಭಕ್ತರದ್ದಾಗಿದೆ.
ಕಾನ್ಪುರದ ನಗರದಿಂದ 25 ಕಿಲೋ ಮೀಟರ್ ದೂರದಲ್ಲಿ ವಾರಾಣಸಿಯ ಕಾಶಿ ವಿಶ್ವನಾಥ್ ದೇವಾಲಯವನ್ನು ಹೋಲುವ ಬೃಹತ್ ಮೂರು ಗುಮ್ಮಟಗಳ ಆಶ್ರಮ ಇದ್ದು, ಭಾರೀ ಗಾತ್ರದ ಗೇಟ್ ಗಳನ್ನು ಅಳವಡಿಸಲಾಗಿದೆ.
ಅದೇ ರೀತಿ ಮೈನ್ ಪುರಿಯಲ್ಲಿರುವ ಫೈವ್ ಸ್ಟಾರ್ ಆಶ್ರಮ ಅರಮನೆಯಂತಿದೆ. ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಈ ಆಶ್ರಮ ನಿರ್ಮಾಣ ಮಾಡಿರುವುದಾಗಿ ಅಂದಾಜಿಸಲಾಗಿದೆ. ಬಾಬಾನ ಭಕ್ತರೊಬ್ಬರು ಈ ಭೂಮಿಯನ್ನು ದೇಣಿಗೆಯಾಗಿ ನೀಡಿದ್ದರಂತೆ. ಆಶ್ರಮದ ಸಮೀಪದಲ್ಲೇ ಈತನ ವಾಸ್ತವ್ಯದ ಬೃಹತ್ ಮನೆ ಇದ್ದು, ಇಲ್ಲಿ ಕಾರ್ಯನಿರ್ವಹಿಸಲು ಹಲವು ಮಂದಿ ಸೇವಕರಿದ್ದಾರೆ ಎಂದು ವರದಿ ತಿಳಿಸಿದೆ.
ಬಾಬಾನ ಟ್ರಸ್ಟ್ ಸದಸ್ಯರಿಗಾಗಿ ಸ್ವಂತ ಆಶ್ರಮವಿದ್ದು, ಕಾಸ್ ಗಂಜ್, ಆಗ್ರಾ, ಕಾನ್ಪುರ್ ಮತ್ತು ಗ್ವಾಲಿಯರ್ ನಲ್ಲಿ ನೂರಾರು ಬಿಘಾಸ್ ಆಸ್ತಿಯನ್ನು ಹೊಂದಿರುವುದಾಗಿ ಮೂಲಗಳು ಹೇಳಿವೆ.
1999ರಲ್ಲಿ ಕಾನ್ಸ್ ಟೇಬಲ್ ಹುದ್ದೆ ತ್ಯಜಿಸಿದ್ದ ಸತ್ಯಪಾಲ್ ಪ್ರವಚನ ಆರಂಭಿಸುವ ಮೂಲಕ ಭೋಲೆ ಬಾಬಾ ಎಂದು ಪ್ರಸಿದ್ಧಿಯಾಗಿದ್ದ. ಈತ ತನ್ನ ಭಕ್ತರ ಹೆಸರಿನಲ್ಲಿ ಐಶಾರಾಮಿ ಕಾರುಗಳನ್ನು ಖರೀದಿಸಿದ್ದಾನೆ.
ಆಶ್ರಮದ ಹೊರಗೆ ಭೋಲೆ ಬಾಬಾ ಮತ್ತು ಪತ್ನಿ ದೇವಿ ಮಾ ಜತೆಗಿದ್ದ ಬೃಹತ್ ಫೋಟೋ ಇದ್ದು, ಹೂವುಗಳಿಂದ ಫೋಟೊವನ್ನು ಅಲಂಕರಿಸಿದ್ದು, ಗೇಟ್ ನ ಹೊರಭಾಗದಲ್ಲಿ ಜನರನ್ನು ಸೆಳೆಯಲು ಧಾರ್ಮಿಕ ಉಕ್ತಿಗಳನ್ನು ಬರೆಯಿಸಲಾಗಿದೆ ಎಂದು ವರದಿ ತಿಳಿಸಿದೆ.
ಆಶ್ರಮದ ಒಳಗೆ ಬೃಹತ್ ಉದ್ಯಾನವನ, ತರಕಾರಿ, ಹೂಗಳನ್ನು ಬೆಳೆಸಿದ್ದು, ದನಗಳ ಶೆಡ್ ಕೂಡಾ ಇದೆ. ಆಶ್ರಮ ಐಶಾರಾಮಿ ಪಂಚತಾರಾ ಹೋಟೆಲ್ ನಂತಿದ್ದು, ಎಲ್ಲಾ ಕೋಣೆಗಳಲ್ಲೂ ಹವಾನಿಯಂತ್ರಿತ, ದೊಡ್ಡ, ದೊಡ್ಡ ಕೂಲರ್ ಗಳನ್ನು ಅಳವಡಿಸಲಾಗಿದೆ. ಆಶ್ರಮದ ಮಧ್ಯಭಾಗದಲ್ಲಿ ಐಶಾರಾಮಿ ಸತ್ಸಂಗ ಭವನ ಇದ್ದು, ಇಲ್ಲಿ ಬೃಹತ್ ಕೂಲರ್, ಸ್ಪೀಕರ್ ಗಳನ್ನು ಅಳವಡಿಸಲಾಗಿದೆ ಎಂದು ವರದಿ ಹೇಳಿದೆ.