ಶಿವಮೊಗ್ಗ: ಭದ್ರಾ ಜಲಾಶಯದ ತಳಭಾಗದಲ್ಲಿರುವ ಗೇಟ್ ಹಾಳಾಗಿದ್ದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಜಲಾಶಯ ತುಂಬುವುದನ್ನೇ ಕಾತುರದಿಂದ ಕಾಯುತ್ತಿದ್ದ ರೈತರು ಕಂಗಾಲಾಗಿದ್ದಾರೆ. ಮಳೆಗಾಲಕ್ಕೂ ಮುನ್ನ ವಾರ್ಷಿಕ ನಿರ್ವಹಣೆ ಮಾಡಿಲ್ಲವೇ ಎಂಬ ಅನುಮಾನ ಕಾಡುತ್ತಿದೆ.
ವಾರದಿಂದ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ಉತ್ತಮ ನೀರು ಬರುತ್ತಿದೆ. ಆದರೆ ಭದ್ರಾ ಜಲಾಶಯದ ತಳಭಾಗದಲ್ಲಿರುವ ಗೇಟ್ ಹಾಳಾಗಿದ್ದು ಮೂರ್ನಾಲ್ಕು ದಿನಗಳಿಂದ ಸಾವಿರಾರು ಕ್ಯೂಸೆಕ್ ನೀರು ಹೊರ ಹೋಗುತ್ತಿದೆ. ಮೂರು ದಿನಗಳಿಂದ 15 ಸಾವಿರ ಕ್ಯೂಸೆಕ್ಸ್‌ಗೂ ಅಧಿಕ ನೀರು ಬರುತ್ತಿದ್ದು ಬಹಳಷ್ಟು ನೀರು ವ್ಯರ್ಥವಾಗುತ್ತಿದೆ.
ಪ್ರಸ್ತುತ ಜಲಾಶಯದಲ್ಲಿ 129.6 ಅಡಿ ನೀರಿದ್ದು 16171 ಕ್ಯೂಸೆಕ್ಸ್ ಒಳಹರಿವು ಇದೆ. ಕಳೆದ ವರ್ಷ ಇದೆ ದಿನ 137.2 ಅಡಿ ನೀರಿತ್ತು. ಕಳೆದ ವರ್ಷ ಮುಂಗಾರು ವಿಫಲವಾದ ಕಾರಣ ಬೇಸಿಗೆ ಬೆಳೆಗೆ ಪಾಳಿ ಪದ್ಧತಿಯಲ್ಲಿ ನೀರು ಕೊಡಲಾಗಿತ್ತು. ಜೂನ್‌ನಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಜುಲೈ ಆರಂಭ ಆಶಾದಾಯಕವಾಗಿದ್ದರೂ ಮುಂದೆ ಇದೇ ರೀತಿ ಮಳೆ ಬರುತ್ತದೆ ಎಂಬ ಭರವಸೆ ಇಲ್ಲ. ಇದ್ದ ನೀರನ್ನು ಉಳಿಸಿಕೊಳ್ಳುವ ಸಮಯದಲ್ಲಿ ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಎಡವಟ್ಟು ಮಾಡಿಕೊಂಡಿದೆ.
ಮುಂಗಾರು ಬೆಳೆಗೆ ಭದ್ರಾ ಜಲಾಶಯದಿಂದ ಯಾವಾಗ ನೀರು ಬಿಡಬಹುದು ಎಂಬ ಲೆಕ್ಕ ಹಾಕುತ್ತಿದ್ದ ರೈತರು ಜಲಾಶಯದಿಂದ ನೀರು ಪೋಲಾಗುತ್ತಿರುವುದು ಕಂಡು ಶಾಕ್ ಆಗಿದ್ದಾರೆ.