ಸಾಗರ: ಸಾಗರ ಕ್ಷೇತ್ರದ ಅಭಿವೃದ್ಧಿಗೆ ಹಿಂದಿನ ಶಾಸಕ ಹರತಾಳು ಹಾಲಪ್ಪ ಕೊಡುಗೆ ಶೂನ್ಯವಾಗಿದೆ. ಕಾಗೋಡು ಅವಧಿಯಲ್ಲಿ ಬಂದ ಅನುದಾನದಲ್ಲಿ ಅಧಿಕಾರ ನಡೆಸಿ, ಅಧಿಕಾರದ ಕೊನೆ ವರ್ಷಗಳಲ್ಲಿ ಕಾಮಗಾರಿ ಮಂಜೂರು ಮಾಡಿಸಿ ಹಣ ಬಿಡುಗಡೆ ಮಾಡಿಸದೆ ಅವಧಿ ಮುಗಿಸಿದ್ದಾರೆ ಎಂದು ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಇಲ್ಲಿನ ಎಪಿಎಂಸಿ ರಸ್ತೆ ಅಭಿವೃದ್ಧಿ ಕಾಮಗಾರಿ, ಗ್ರಂಥಾಲಯ ಕಟ್ಟಡ ಹಾಗೂ ಸಬ್‌ಜೈಲ್ ಕಾಂಪೌಂಡ್ ಕಾಮಗಾರಿಯನ್ನು ಗುರುವಾರ ವೀಕ್ಷಣೆ ಮಾಡಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ತಾಲೂಕು ಕಚೇರಿ, ಮೀನು ಮಾರುಕಟ್ಟೆ, ತಾಯಿಮಗು ಆಸ್ಪತ್ರೆ, ಎಪಿಎಂಸಿ, ಸಬ್‌ಜೈಲ್ ಹೀಗೆ ಎಲ್ಲಾ ಕಾಮಗಾರಿಗಳಿಗೂ ನಾನು ಶಾಸಕನಾದ ಮೇಲೆ ಅನುದಾನ ತಂದು ಅಭಿವೃದ್ಧಿಪಡಿಸಿದ್ದೇನೆ. ಬಿಜೆಪಿಗರು ತಮ್ಮ ಶಾಸಕರು ಅನುದಾನ ತಂದಿದ್ದರು ಎಂದು ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾಮಗಾರಿ ಮಂಜೂರು ಮಾಡಿಸಿರುವುದೇ ಅಭಿವೃದ್ಧಿ ಅಲ್ಲ. ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಪೂರ್ಣಗೊಳಿಸಿದಾಗ ಅಭಿವೃದ್ಧಿ ಎನಿಸಿಕೊಳ್ಳುತ್ತದೆ.
ಜೋಗ ಅಭಿವೃದ್ಧಿಗೆ ಯಡಿಯೂರಪ್ಪ 180 ಕೋಟಿ ರೂ. ವೆಚ್ಚದಲ್ಲಿ ಚಾಲನೆ ನೀಡಿದರು. ಆದರೆ ಹಣ ಕೊಟ್ಟಿಲ್ಲ. 72 ಕೋಟಿ ರೂ. ನಮ್ಮ ಸರ್ಕಾರ ಕೊಟ್ಟಿದೆ. ಜೋಗ ಅಭಿವೃದ್ಧಿಗೆ ಬಿ.ಎಸ್.ಯಡಿಯೂರಪ್ಪ, ರಾಘವೇಂದ್ರ, ಹಾಲಪ್ಪ ಕೊಡುಗೆ ಏನೂ ಇಲ್ಲ. ನಮ್ಮ ಸರ್ಕಾರ ಹಣ ನೀಡಿದೆ.
ಸದ್ಯದಲ್ಲಿಯೇ ಜೋಗವನ್ನು ವಿಶ್ವದರ್ಜೆ ಪ್ರವಾಸಿ ತಾಣವಾಗಿಸುವ ಯೋಜನೆ ರೂಪಿಸಲಾಗಿದೆ. ರೈನ್‌ಡ್ಯಾನ್ಸ್, ಈಜುಕೊಳ, ಜಿಪ್‌ವೇ, ಸ್ಕೂಬಾ ಡ್ರೈವ್, ರೋಪ್‌ವೇ ಸೇರಿದಂತೆ ಪ್ರವಾಸಿ ಆಕರ್ಷಕ ಸೌಲಭ್ಯ ನೀಡಲಾಗುತ್ತದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಮಲ ಮಾದರಿಯ ಪ್ರವಾಸಿದ್ವಾರ ನಿರ್ಮಿಸಲು ಚಿಂತನೆ ನಡೆಸಲಾಗಿತ್ತು. ಅದನ್ನು ತೆಗೆದು ಸುಂದರವಾದ ಕಮಾನು ರೂಪಿಸಲಾಗುತ್ತಿದೆ ಎಂದರು.
2008-09ರಲ್ಲಿ ನಾನು ಶಾಸಕನಾಗಿದ್ದಾಗ ಒಳಚರಂಡಿ ಕಾಮಗಾರಿಗೆ 70 ಕೋಟಿ ರೂ. ಅನುದಾನ ತಂದಿದ್ದೆ. ನಂತರ ಯಾರೂ ಒಳಚರಂಡಿ ಕಾಮಗಾರಿ ಬಗ್ಗೆ ಆಸಕ್ತಿ ವಹಿಸಿಲ್ಲ. ಮತ್ತೆ ಸರ್ಕಾರದ ಮೇಲೆ ಒತ್ತಡ ಹೇರಿ 34ಕೋಟಿ ರೂ. ಮಂಜೂರು ಮಾಡಿಸಲಾಗಿದೆ. ಇದರ ಜೊತೆಗೆ ಜೋಗದ ಯೂತ್ ಹಾಸ್ಟೆಲ್ ಅಭಿವೃದ್ಧಿಗೆ 90 ಲಕ್ಷ ರೂ. ಮಂಜೂರಾಗಿದೆ.
ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ 5 ಕೋಟಿ ರೂ. ಮಂಜೂರಾಗಿದ್ದು ಜಾಗ ಗುರುತಿಸಲಾಗುತ್ತಿದೆ. ಜೈಲ್ ಗೋಡೆ ನಿರ್ಮಾಣಕ್ಕೆ 1.30 ಕೋಟಿ ರೂ., ಎಪಿಎಂಸಿ ಪ್ರಾಂಗಣದಲ್ಲಿ ರಸ್ತೆ ಚರಂಡಿ ನಿರ್ಮಾಣಕ್ಕೆ 2.50 ಕೋಟಿ ರೂ., ಗ್ರಂಥಾಲಯ ಅಭಿವೃದ್ಧಿಗೆ 50 ಲಕ್ಷ ರೂ., ಮೀನು ಮಾರುಕಟ್ಟೆ ಅಭಿವೃದ್ಧಿಗೆ 1.20 ಕೋಟಿ ರೂ., ಈಜುಕೊಳ ಅಭಿವೃದ್ಧಿಗೆ 20 ಲಕ್ಷ ರೂ. ಮಂಜೂರಾಗಿದೆ.
ಬಿಜೆಪಿಯವರು ಹೇಳುವಂತೆ ಈ ಯಾವ ಅನುದಾನವೂ ಹಿಂದಿನ ಶಾಸಕರ ಅವಧಿಯಲ್ಲಿ ಮಂಜೂರಾಗಿದ್ದಲ್ಲ. ಅನುದಾನದ ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿತಪ್ಪಿಸುವ ಕೆಲಸ ಬಿಜೆಪಿ ಮಾಡಬಾರದು ಎಂದರು.
ಈ ಸಂದರ್ಭದಲ್ಲಿ ಸೋಮಶೇಖರ ಲ್ಯಾವಿಗೆರೆ, ಚೇತನರಾಜ್ ಕಣ್ಣೂರು, ಗಣಪತಿ ಮಂಡಗಳಲೆ, ಕೆ.ಹೊಳೆಯಪ್ಪ, ಕಲಸೆ ಚಂದ್ರಪ್ಪ, ಆನಂದ್ ಭೀಮನೇರಿ, ಟಿ.ಪಿ.ರಮೇಶ್, ಬಸವರಾಜ ಸೈದೂರು, ಯಶವಂತ ಪಣಿ, ಐ.ಜಿ.ಸ್ವರೂಪ್, ತಾರಾಮೂರ್ತಿ ಇನ್ನಿತರರು ಹಾಜರಿದ್ದರು.