ಹಾಸನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕಾನ್ಸ್ ಸ್ಟೇಬಲ್ ಒಬ್ಬರು ಎಸ್ಪಿ ಕಚೇರಿ ಎದುರೇ ಪತ್ನಿಗೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಂದು ನಡೆದಿದೆ.
ಮೂಲತಃ ಹಾಸನ ಹೊರವಲಯದ ಚನ್ನಪಟ್ಟಣದ ನಿವಾಸಿ ಮಮತಾ(38) ಕೊಲೆಯಾದ ಮಹಿಳೆ. ಕೆ.ಆರ್.ಪುರಂನ ಲೋಕನಾಥ್ನನ್ನು 17 ವರ್ಷದ ಹಿಂದೆ ಮಮತಾ ಪ್ರೀತಿಸಿ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.
ಹಲವು ತಿಂಗಳುಗಳಿಂದ ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತಿತ್ತು. ಇದರಿಂದ ಮನನೊಂದಿದ್ದ ಪತ್ನಿ ಮಮತಾ ಪತಿ ಲೋಕನಾಥ್ ವಿರುದ್ಧ ಎಸ್ಪಿಗೆ ದೂರು ನೀಡಲು ಇಂದು ಬೆಳಗ್ಗೆ ಕಚೇರಿ ಬಳಿ ಹೋಗಿದ್ದರು.ಪತ್ನಿ ಎಸ್ಪಿ ಕಚೇರಿ ಬಳಿ ಬಂದಿದ್ದಾಳೆಂದು ಕೋಪಗೊಂಡ ಲೋಕನಾಥ್, ಕಚೇರಿ ಎದುರೇ ಪತ್ನಿಗೆ ಚಾಕುವಿನಿಂದ ಎದೆಗೆ ಇರಿದು ಪರಾರಿಯಾಗಿದ್ದನು.
ರಕ್ತದ ಮಡುವಿನಲ್ಲೇ ಎಸ್ಪಿ ಕಚೇರಿಗೆ ಒಳಗೆ ಹೋದ ಮಮತಾ ಕುಸಿದು ಬಿದ್ದಿದ್ದಾರೆ. ತಕ್ಷಣ ಕಚೇರಿಯಲ್ಲಿದ್ದ ಸಿಬ್ಬಂದಿ ಮಮತ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತ್ತಾದರೂ ಕೆಲ ಹೊತ್ತಿನಲ್ಲೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಪತ್ನಿಯನ್ನು ಕೊಂದು ಪರಾರಿಯಾಗಿದ್ದ ಆರೋಪಿ ಪತಿ ಲೋಕನಾಥ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಫೋಷಕರ ಆಕ್ರಂದನ: ಮಗಳ ಸಾವಿಗೆ ಅಳಿಯನೇ ಕಾರಣ. ಆತನಿಗೆ ಕಠಿಣ ಶಿಕ್ಷೆಯಾಗಬೇಕು. ಆಸ್ತಿ, ಸೈಟ್, ಹಣಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದ ಎಂದು ಮಾವ ಶಾಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.