Spread the love

ಬೆಂಗಳೂರು: ಐದು ದಿನಗಳ ಹೈಡ್ರಾಮದ ಬಳಿಕ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಅಂತಿಮಗೊಳಿಸಿದೆ. ಆದರೆ ಈಗ ನನಗೂ ಡಿಸಿಎಂ ಸ್ಥಾನ ಕೊಡಲೇಬೇಕು ಅಂತಾ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಪಕ್ಷದ ಹೈಕಮಾಂಡ್ ನ್ನು ಒತ್ತಾಯಿಸಿದ್ದಾರೆ.

ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಅಧಿಕೃತವಾಗಿ ಡಿಸಿಎಂ ಸ್ಥಾನ ಬರಬೇಕಿದೆ. ಪಕ್ಷ ಅಧಿಕಾರಕ್ಕೆ ಬರಲು ಎಲ್ಲರೂ ಕೊಡುಗೆ ನೀಡಿದ್ದಾರೆ. ಒಬ್ಬರೇ ಉಪ ಮುಖ್ಯಮಂತ್ರಿ  ಆಗಿರಬೇಕು ಎಂದು ಹೇಳಲು ಬರುವುದಿಲ್ಲ. ಡಿ.ಕೆ. ಶಿವಕುಮಾರ್ ಅವರ ಅಭಿಪ್ರಾಯ ಹೇಳಿರುತ್ತಾರೆ. ಎಲ್ಲರೂ ಒಟ್ಟಿಗೆ ಇದ್ದೇವೆ. ಎಲ್ಲರೂ ಸೇರಿ ಅಧಿಕಾರ ನಡೆಸುತ್ತೇವೆ ಎಂದರು.

ಸರ್ಕಾರದಲ್ಲಿ ದಲಿತರ ಪ್ರಾತಿನಿಧ್ಯ ಹೇಗಿರಲಿದೆ ಎಂದು ನೋಡಬೇಕಿದೆ. ಪರಿಶಿಷ್ಟರಿಗೆ ಮೀಸಲಾದ ಒಟ್ಟು 51 ಕ್ಷೇತ್ರಗಳ ಪೈಕಿ 37 ರಲ್ಲಿ ಪಕ್ಷದಿಂದ ಸ್ಪರ್ಧಿಸಿದವರು ಗೆದ್ದಿದ್ದೇವೆ. ಬೇರೆ ಕ್ಷೇತ್ರಗಳಲ್ಲೂ ದಲಿತ ಸಮುದಾಯದ ಮತಗಳು ಫಲಿತಾಂಶದ ಮೇಲೆ ಪರಿಣಾಮ ಬೀರಿವೆ ಎಂದರು.

ನಾವು ಶಿಸ್ತಿನ ಸಿಪಾಯಿಗಳು, ಲಾಬಿ ಮಾಡಲ್ಲ. ಆದರೆ ಯಾವ ಸಮುದಾಯದ ಬೆಂಬಲ ದೊರಕಿದೆ ಎಂಬುದನ್ನು ಹೈಕಮಾಂಡ್ ಅರ್ಥ ಮಾಡಿಕೊಳ್ಳಬೇಕು. ರಾಜಸ್ಥಾನದ ರೀತಿ ಇಲ್ಲಿ ಆಗಲ್ಲ ಬಿಡಲ್ಲ. ಸರ್ಕಾರ ಒಳ್ಳೆಯ ಆಡಳಿತ ನೀಡುವ ನಿರೀಕ್ಷೆ ಜನರಲ್ಲಿದೆ ಎಂದು ಪರಮೇಶ್ವರ್ ಹೇಳಿದರು.

Leave a Reply

Your email address will not be published. Required fields are marked *