ಬೆಂಗಳೂರು : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಚಿತ್ರನಟ ದರ್ಶನ್ ಸರಿಯಾಗಿ ಊಟ ಮಾಡದೆ ಹಾಗೂ ನಿದ್ದೆ ಮಾಡದೆ ರಾತ್ರಿ ಕಳೆದಿದ್ದಾರೆ.
ದರ್ಶನ್ ಹಾಗೂ ನಾಲ್ವರು ಆರೋಪಿಗಳನ್ನು ನ್ಯಾಯಾಲಯ ನಿನ್ನೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿತ್ತು. ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಯಿತು.
ದರ್ಶನ್ ಜೈಲು ಸೇರುತ್ತಿದ್ದಂತೆ ವಿಚಾರಣಾಧೀನ ಕೈದಿ ನಂಬರ್ ನೀಡಿ ಬ್ಯಾರೆಕ್‌ಗೆ ಕಳುಹಿಸಲಾಯಿತು. ನಿನ್ನೆ ರಾತ್ರಿ ಊಟಕ್ಕೆ ಚಪಾತಿ, ಅನ್ನ-ಸಾಂಬಾರ್, ಮಜ್ಜಿಗೆ ಜೈಲೂಟ ನೀಡಲಾಯಿತು. ಆದರೆ ದರ್ಶನ್ ಸರಿಯಾಗಿ ಊಟ ಮಾಡಿಲ್ಲ.
ಪೊಲೀಸ್ ಕಸ್ಟಡಿ ವಿಚಾರಣೆಯಲ್ಲಿ ಹಣ್ಣುಗಾಯಿ ನೀರುಗಾಯಿ ಆಗಿದ್ದ ದರ್ಶನ್ ಅವರು, ಮೊದಲ ದಿನ ರಾತ್ರಿ ಸರಿಯಾಗಿ ಊಟ, ನಿದ್ರೆ ಮಾಡದೆ ಜೈಲಿನಲ್ಲಿ ಸುಮನೆ ಕುಳಿತಿದ್ದರು. ತಡರಾತ್ರಿ ನಿದ್ರೆಗೆ ಜಾರಿದರು ಎಂದು ತಿಳಿದುಬಂದಿದೆ. ಬೆಳಗ್ಗೆ 6 ಗಂಟೆಗೆ ಎದ್ದು ಅವರು ನಿತ್ಯಕರ್ಮ ಮುಗಿಸಿ ಚಿಂತಾಕ್ರಾಂತರಾಗಿಯೇ ಕುಳಿತಿದ್ದರು. ಜೈಲಿನ ಮೆನು ಪ್ರಕಾರ ಅವರಿಗೆ ಬೆಳಗಿನ ತಿಂಡಿ ಪಲಾವ್ ನೀಡಲಾಯಿತು.
13 ವರ್ಷಗಳ ಹಿಂದೆ 2011ರಲ್ಲಿ ತನ್ನ ಪತ್ನಿ ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ಮಾಡಿ ಹಲವು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಈಗ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.
ರೇಣುಕಾಸ್ವಾಮಿ ಹಲ್ಲೆ ಪ್ರಕರಣದಲ್ಲಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಈವರೆಗೆ ನಟ ದರ್ಶನ್ , ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸದ್ಯ ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾರೆ.