ವಿಜಯಪುರ: ”ನಟ ದರ್ಶನ್ ವಿಚಾರದಲ್ಲಿ ಯಾರ ಮೇಲೆಯೂ ಒತ್ತಡ ಹಾಕಿಲ್ಲ. ಅಂಥ ಕೆಲಸ ಮಾಡಿದವರ ಪರವಾಗಿ ಯಾರು ನಿಲ್ಲುತ್ತಾರೆ? ನಾನು ದರ್ಶನ್ ಸ್ನೇಹಿತರೇ, ಆದರೆ ಅವರ ಪರವಾಗಿ ನಾನು ಒತ್ತಡ ಹಾಕಿಲ್ಲ” ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯಿಸಿದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಚಿತ್ರನಟ ದರ್ಶನ್ ರಕ್ಷಣೆಗೆ ಕೆಲ ಕಾಂಗ್ರೆಸ್ ಶಾಸಕರು ಪೊಲೀಸರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪವನ್ನು ಜಮೀರ್ ಅಹ್ಮದ್ ತಳ್ಳಿಹಾಕಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ”ದರ್ಶನ್ ಪ್ರಕರಣದಲ್ಲಿ ಯಾರೂ ಪೊಲೀಸರ ಮೇಲೆ ಒತ್ತಡ ಹಾಕಿಲ್ಲ. ನಾನೇ ಪೊಲೀಸರ ಮೇಲೆ ಒತ್ತಡ ಹಾಕಿದ್ದೇನೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಆದರೆ ನಾನು ಒತ್ತಡ ಹಾಕಿಲ್ಲ. ದರ್ಶನ್ ಮತ್ತು ನಾನು ಒಳ್ಳೆಯ ಸ್ನೇಹಿತರು ಆ ವಿಚಾರದಲ್ಲಿ ಇಲ್ಲ ಎಂದು ಹೇಳಲ್ಲ. ಇಂಥ ಘಟನೆ ಮಾಡಿದಾಗ ಯಾರು ಅವರ ಪರ ನಿಲ್ಲುತ್ತಾರೆ” ಎಂದು ಪ್ರಶ್ನಿಸಿದರು.
”ತಪ್ಪು ತಪ್ಪೇ. ಉಪ್ಪು ತಿಂದವ ನೀರು ಕುಡಿಯಲೇಬೇಕು. ತಪ್ಪು ಯಾರೇ ಮಾಡಲಿ, ನಾನಿದ್ದರೂ ಅಷ್ಟೇ. ದರ್ಶನ್ ಇದ್ದರೂ ಅಷ್ಟೇ, ಇನ್ನೊಬ್ಬರು ಇದ್ದರೂ, ಯಾರಿದ್ದರೂ ಅಷ್ಟೇ. ಮಾಧ್ಯಮದಲ್ಲಿ ನನ್ನ ಹೆಸರನ್ನು ನೇರವಾಗಿ ಹೇಳಿಲ್ಲ. ಪರೋಕ್ಷವಾಗಿ ಹೇಳಿದ್ದಾರೆ. ಆ ರೀತಿ ಯಾವುದೂ ಇಲ್ಲ. ಕಾನೂನಿನ ಚೌಕಟ್ಟಿಯಲ್ಲಿ ತನಿಖೆ ನಡೆಯುತ್ತಿದೆ. ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯ ಮುಂದಿನ ತೀರ್ಮಾನ ಮಾಡುತ್ತದೆ” ಎಂದು ಅವರು ಹೇಳಿದರು.