Spread the love

ಮಂಗಳೂರು: ಈ ಬಾರಿ ನಡೆದ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಇದೇ ನನ್ನ ಕೊನೇ ಚುನಾವಣೆಯಾಗಿದ್ದು, ದಯಮಾಡಿ ನನ್ನನ್ನು ಗೆಲ್ಲಿಸಿ ಎಂದು ಕೇಳಿಕೊಂಡಿದ್ದ ರಮಾನಾಥ್‌ ರೈ  ಸೋಲು ಕಂಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಸಕ್ರಿಯ ರಾಜಕಾರಣದಲ್ಲಿರುವ ಭರವಸೆಯನ್ನು ನೀಡಿದ್ದಾರೆ.

ಮಂಗಳೂರಿನಲ್ಲಿ ಮಾಜಿ ಸಚಿವ ರಮಾನಾಥ್ ರೈ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಾನು ಇದೇ ನನ್ನ ಕಡೆಯ ಚುನಾವಣಾ ಸ್ಪರ್ಧೆ ಎಂದು ಹೇಳಿಕೆ ನೀಡಿದ್ದೆ. ಈಗ ಅದರಂತೆ ನಡೆದುಕೊಳ್ಳುತ್ತಿದ್ದೇನೆ. ಆದರೆ, ಚುನಾವಣಾ ರಾಜಕೀಯದಿಂದ ದೂರವಿದ್ದರೂ ಪಕ್ಷದ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿರುತ್ತೇನೆ ಎಂದು ಹೇಳಿದರು.

ನನಗೀಗ ಎಪ್ಪತ್ತೊಂದು ವರ್ಷ. ನನಗಿಂತಲೂ ಹಿರಿಯರು ಚುನಾವಣೆಗೆ ನಿಂತಿದ್ದಾರೆ. ಆದರೆ ನಾನು ಚುನಾವಣೆಗೆ ನಿಲ್ಲೋದಕ್ಕೆ ಪಕ್ಷದಲ್ಲೇ ಅಪಸ್ವರ ಇರುವುದರಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ರೈ ಹೇಳಿದ್ದಾರೆ.  ಚುನಾವಣಾ ರಾಜಕೀಯದಿಂದ ಮಾತ್ರ ದೂರವಿದ್ದು, ಪಕ್ಷದ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುತ್ತೇನೆ ಎಂದು ಹೇಳಿದ ಮಾಜಿ ಸಚಿವ ರಮಾನಾಥ ರೈ, ಲೋಕಸಭಾ ಚುನಾವಣೆ ಸ್ಪರ್ಧೆಗೆ ಸೂಚಿಸಿದ್ದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ತಿಳಿಸಿದ್ದಾರೆ.

ಚುನಾವಣಾ ರಾಜಕೀಯದಿಂದ ಮಾತ್ರ ದೂರವಿರಲಿದ್ದೇನೆ. ಆದರೆ ಪಕ್ಷ ಎಂಎಲ್‌ಸಿ ಸೇರಿದಂತೆ ಇತರ ಅವಕಾಶಗಳನ್ನು ನೀಡಿದ್ದಲ್ಲಿ ಅದನ್ನು ಸ್ವೀಕರಿಸಲು ಸಿದ್ಧನಿದ್ದೇನೆ. ನನಗಿಂತ ಪಕ್ಷ ದೊಡ್ಡದು. ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ನಾನು ಪಕ್ಷಕ್ಕೆ ವಿರುದ್ಧವಾಗಿ ಎಂದೂ ನಡೆದಿಲ್ಲ ಆದ್ದರಿಂದ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದರು.

 

Leave a Reply

Your email address will not be published. Required fields are marked *