ಹಾಸನ: ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಹಿರಿಯ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರ ವಿರುದ್ಧದ ಅನೈಸರ್ಗಿಕ ಲೈಂಗಿಕ ಕ್ರಿಯೆ ಎಸಗಿದ ಆರೋಪ ಸಂಬಂಧ ಹೊಳೆ ನರಸೀ ಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ರವಿವಾರ ಬಂಧಿಸಿದ್ದಾರೆ.
ದೂರಿನ ಬೆನ್ನಲ್ಲೇ ಸೂರಜ್ ರೇವಣ್ಣ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು, ಶನಿವಾರ ರಾತ್ರಿ ಹಾಸನದ ಸಿಇಎನ್ ಠಾಣೆಯಲ್ಲಿ ವಿಚಾರಣೆ ನಡೆಸಿ ನಿಗೂಢ ಸ್ಥಳಕ್ಕೆ ಕರೆದೊಯ್ದಿದ್ದರು.
ಏನಿದು ಪ್ರಕರಣ?: ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು ಚನ್ನರಾಯಪಟ್ಟಣ ತಾಲೂಕು ಗನ್ನಿಕಡ ಬಳಿ ಇರುವ ತೋಟದ ಮನೆಗೆ ಜೂ.16ರಂದು ನನ್ನನ್ನು ಕರೆಸಿಕೊಂಡು ನನ್ನ ಮೇಲೆ ಅನೈಸರ್ಗಿಕವಾಗಿ ಲೈಂಗಿಕ ಸಂಭೋಗ ನಡೆಸಿ ದೌರ್ಜನ್ಯ ನಡೆಸಿದ್ದಾರೆ. ಸೂರಜ್ ರೇವಣ್ಣ ಮತ್ತು ಹನುಮನಹಳ್ಳಿಯ ಶಿವಕುಮಾರ್ ಎಂಬವರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆಯಿದೆ. ಅವರಿಬ್ಬರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೊಳೆನರಸೀಪುರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅರಕಲಗೂಡು ತಾಲೂಕಿನ ಹಳ್ಳಿಯೊಂದರ ಸಂತ್ರಸ್ತ ಯುವಕ ಮನವಿ ಮಾಡಿದ್ದಾನೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸರು ಐಪಿಸಿ ಕಲಂ 377, 342, 506, 34ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.
ಸಂತ್ರಸ್ತ ಯುವಕ 14 ಪುಟಗಳ ದೂರು ಬರೆದು, ಬೆಂಗಳೂರಿನಲ್ಲಿ ಡಿಜಿಪಿ ಕಚೇರಿಗೂ ದೂರು ನೀಡಿದ್ದ. ಆ ದೂರಿನ ಪ್ರತಿಯು ಹಾಸನ ಎಸ್ಪಿಗೂ ಮೇಲ್ ಮೂಲಕ ತಲುಪಿತ್ತು. ಜೊತೆಗೆ ಸಿಎಂ, ಡಿಸಿಎಂ, ಗೃಹ ಸಚಿವರಿಗೂ ದೂರು ಪ್ರತಿಯನ್ನು ರವಾನಿಸಿದ್ದ ಎನ್ನಲಾಗಿದೆ. ಹಾಸನ ಎಸ್ಪಿ ಕಚೇರಿಗೆ ಬಂದ ದೂರನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.
ಸೂರಜ್ ರೇವಣ್ಣ ವಿಚಾರಣೆ: ದೂರು ಬಂದ ಬೆನ್ನಲ್ಲೇ ಸೂರಜ್ ರೇವಣ್ಣ ಅವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಹಾಸನದ ಸಿಇಎನ್ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಹೊಳೆನರಸೀಪುರದ ಪೊಲೀಸರು ಸೂರಜ್ ಅವರ ಗನ್ನಿಕಡದ ತೋಟದ ಮನೆಯಿಂದ ಸೂರಜ್ ಅವರ ಇನ್ನೋವಾ ಕಾರಿನಲ್ಲಿಯೇ ಹಾಸನದ ಸಿಇಎನ್ ಪೊಲೀಸ್ ಠಾಣೆಗೆ ಕರೆತಂದರು. ಸಂತ್ರಸ್ತ ಯುವಕ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡಿದ ಸಂಬಂಧದ ಆಡಿಯೋಗಳನ್ನು ಈಗಾಗಲೇ ವಶಕ್ಕೆ ಪಡೆದಿರುವ ಪೊಲೀಸರು, ಇನ್ನಷ್ಟು ಆಡಿಯೋ ಸೇರಿ ಹಲವು ದಾಖಲೆಗಳನ್ನು ಪಡೆಯುವ ಪ್ರಯತ್ನ ಮುಂದುವರಿಸಿದ್ದಾರೆ.