Breaking
Tue. Jul 16th, 2024

ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ; ಚಿಲ್ಲರೆ ಮಾರಾಟ ತೆರಿಗೆ ಹೆಚ್ಚಿಸಿದ ಸರ್ಕಾರ

By Mooka Nayaka News Jun 15, 2024
Spread the love

ಬೆಂಗಳೂರು: ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ(Retail Sales Tax)ಹೆಚ್ಚಳ ಮಾಡಿದ್ದು, ರಾಜ್ಯದಲ್ಲಿ ತೈಲ ಬೆಲೆ ಹೆಚ್ಚಳ‌ವಾಗಲಿದೆ.

ರಾಜ್ಯ ಸರ್ಕಾರ ಶನಿವಾರ ಪೆಟ್ರೋಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆಯನ್ನು ಶೇ 25.92 ರಿಂದ ಶೇ 29.84 ಕ್ಕೆ ಏರಿಕೆ ಮಾಡಿದೆ ಮತ್ತು ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆಯನ್ನು ಶೇ. 14.34 ರಿಂದ ಶೇ. 18.44 ಕ್ಕೆ ಹೆಚ್ಚಳ ಮಾಡಿದೆ.

ರಾಜ್ಯ ಸರ್ಕಾರದ ತೆರಿಗೆ ಹೆಚ್ಚಳದ ಪರಿಣಾಮ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳ‌ವಾಗಲಿದೆ. ಇದರೊಂದಿಗೆ, ಸುದೀರ್ಘ ಸಮಯದ ನಂತರ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದುಬಾರಿಯಾಗುತ್ತಿದೆ.

ತಕ್ಷಣದಿಂದಲೇ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳವಾಗಲಿದೆ ಎಂದು ರಾಜ್ಯ ಸರ್ಕಾರ ಇಂದು ಮಧ್ಯಾಹ್ನ ಹೊರಡಿಸಿರುವ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ.

ಪ್ರಸ್ತುತ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 99.84 ರೂ. ಆಗಿದ್ದು, ಡೀಸೆಲ್‌ ಬೆಲೆ ಲೀಟರ್‌ಗೆ 85.93 ರೂ. ಆಗಿದೆ. ಇದೀಗ ತೆರಿಗೆ ಹೆಚ್ಚಳದ ಬಳಿಕ ಪೆಟ್ರೋಲ್‌ ದರ ಲೀಟರ್‌ಗೆ 102.84 ರೂ. ಆಗಲಿದೆ. ಡೀಸೆಲ್‌ ದರ ಲೀಟರ್‌ಗೆ 89.43 ರೂ. ಆಗಲಿದೆ.

ಸಾಗಾಟ ವೆಚ್ಚಕ್ಕನುಗುಣವಾಗಿ ದರ ವ್ಯತ್ಯಾಸವಾಗುವುದರಿಂದ ವಿವಿಧ ಜಿಲ್ಲೆಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ದರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

Related Post