Spread the love

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬರೆದಿದ್ದಾರೆನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಬಿಜೆಪಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದು, ನಕಲಿ ಪತ್ರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಸೋಲಿನ ಭೀತಿಯಿಂದ ಹತಾಶೆಗೀಡಾಗಿರುವ ಬಿಜೆಪಿ ನನ್ನ ಹೆಸರಿನ ಖೊಟ್ಟಿ ಪತ್ರವನ್ನು ರಚಿಸಿ ಅಪಪ್ರಚಾರ ಮಾಡುತ್ತಿದೆ. ಇಂತಹ ಯಾವ ಪತ್ರವನ್ನೂ ನಾನು ಬರೆದಿಲ್ಲ. ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಈ ಸುಳ್ಳು ಪ್ರಚಾರಕ್ಕೆ ಬಲಿಯಾಗಬಾರದು ಎಂದು ಹೇಳಿದ್ದಾರೆ.

ನನ್ನ ಮತ್ತು ಡಿಕೆ.ಶಿವಕುಮಾರ್ ಸಂಬಂಧ ಸೌಹಾರ್ದಯುತವಾಗಿದೆ, ಇದಕ್ಕೆ ಹುಳಿ ಹಿಂಡುವ ಪ್ರಯತ್ನ ಯಶಸ್ಸು ಕಾಣಲಾರದು. ಶೀಘ್ರದಲ್ಲಿಯೇ ಪೊಲೀಸರಿಗೆ ದೂರು ನೀಡಿ ಈ ಕಿಡಿಗೇಡಿತನದ ಪತ್ರ ಸೃಷ್ಟಿಸಿ ಹಂಚುತ್ತಿರುವವರ ವಿರುದ್ಧ ಕ್ರಮ‌ಕೈಗೊಳ್ಳಲು ಒತ್ತಾಯಿಸುತ್ತೇನೆಂದು ತಿಳಿಸಿದ್ದಾರೆ.

ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಸೋಲಿನ ಹತಾಶೆಯಲ್ಲಿ ಬಿಜೆಪಿ ತನ್ನ ಫೇಕ್ ಫ್ಯಾಕ್ಟರಿಗೆ ಹೆಚ್ಚಿನ ಕೆಲಸ ನೀಡಿದೆ.ಬಿಜೆಪಿಯ ನಕಲಿ ಮೋರ್ಚಾವು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ಅವರ ಹೆಸರಲ್ಲಿ ನಕಲಿ ಪತ್ರ ಸೃಷ್ಟಿಸಿ ಹರಿಬಿಟ್ಟಿದ್ದಾರೆ. ಸರ್ಕಾರಿ ಲೆಟರ್ ಹೆಡ್, ಹಾಗೂ ಸಿದ್ದರಾಮಯ್ಯನವರ ಸಹಿ ನಕಲು ಮಾಡಿದ್ದು ಗಂಭೀರ ಅಪರಾಧ. ಚುನಾವಣಾ ಆಯೋಗ ಹಾಗೂ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದವರೆಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ.

Leave a Reply

Your email address will not be published. Required fields are marked *