ಬೆಂಗಳೂರು: ನಟ ದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮರಣೋತ್ತರ ಪರೀಕ್ಷಾ ವರದಿ ಬಹಿರಂಗವಾಗಿದ್ದು, ತೀವ್ರ ಆಘಾತ ರಕ್ತಸ್ರಾವದಿಂದ ರೇಣುಕಾಸ್ವಾಮಿ ಸಾವಾಗಿದೆ ಎಂದು ಹೇಳಲಾಗಿದೆ.
ಕನ್ನಡದ ಖ್ಯಾತ ನಟ ದರ್ಶನ್ ತೂಗುದೀಪ ಅವರು ಚಿತ್ರಹಿಂಸೆ ನೀಡಿ ಹತ್ಯೆಗೈದಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ರೇಣುಕಾಸ್ವಾಮಿ ತೀವ್ರ ಆಘಾತ, ಚಿತ್ರಹಿಂಸೆ ಮತ್ತು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಶವಪರೀಕ್ಷೆ ವರದಿಯಲ್ಲಿ ತಿಳಿಸಲಾಗಿದೆ.
ಶವಪರೀಕ್ಷೆಯಲ್ಲಿ ರೇಣುಕಾ ಸ್ವಾಮಿ ಅವರ ದೇಹದ ಮೇಲೆ 15 ಗಾಯಗಳು ಕಂಡುಬಂದಿವೆ ಎಂದು ಹೇಳಿದ್ದು, ರೇಣುಕಾ ಸ್ವಾಮಿ ಅವರ ದೇಹದ ತಲೆ, ಹೊಟ್ಟೆ, ಎದೆ ಮತ್ತು ಇತರ ಭಾಗಗಳಲ್ಲಿ ಗಾಯದ ಗುರುತುಗಳಿವೆ.
ರೇಣುಕಾಸ್ವಾಮಿ ಮೈ ಮೇಲೆ ಇರುವ ಗಾಯದ ಗುರುತುಗಳು ಮರದ ಕೋಲು, ಚರ್ಮದ ಬೆಲ್ಟ್ ಹಾಗೂ ಹಗ್ಗದಿಂದ ಹೊಡೆದ ಗುರುತುಗಳಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ತಲೆಗೆ ತೀವ್ರ ಗಾಯ
ಇನ್ನು ರೇಣುಕಾಸ್ವಾಮಿ ಅವರ ತಲೆಯನ್ನು ಶೆಡ್ಡಿನಲ್ಲಿ ನಿಂತಿದ್ದ ಮಿನಿ ಟ್ರಕ್‌ಗೆ ಹೊಡೆಯಲಾಗಿದೆ ಎಂದು ಶವಪರೀಕ್ಷೆ ವರದಿ ಹೇಳಲಾಗಿದ್ದು, ಈ ವಾಹನವನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ನೀಡಲು ಬಳಸಿದ ಮರದ ಕೋಲುಗಳು, ಚರ್ಮದ ಬೆಲ್ಟ್ ಮತ್ತು ಹಗ್ಗವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.