ಅಮರಾವತಿ: ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ನಾಲ್ಕನೇ ಅವಧಿಗೆ ಆಂಧ್ರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
ಜನಸೇನಾ ಮುಖ್ಯಸ್ಥ ಮತ್ತು ನಟ ಪವನ್ ಕಲ್ಯಾಣ್ ಅವರು ನಾಯ್ಡು ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆಂಧ್ರ ಪ್ರದೇಶದ ರಾಜ್ಯಪಾಲ ಎಸ್ ಅಬ್ದುಲ್ ನಜೀರ್ ಅವರು ಸಿಎಂ ಮತ್ತು ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ಪ್ರಧಾನಿ ನರೇಂದ್ರ ಮೋದಿ, ಅವರ ಸಂಪುಟದ ಸಹೋದ್ಯೋಗಿಗಳಾದ ಅಮಿತ್ ಶಾ, ನಿತಿನ್ ಗಡ್ಕರಿ, ಜೆಪಿ ನಡ್ಡಾ ಸೇರಿದಂತೆ ಹಲವಾರು ನಾಯಕರು ಮತ್ತು ಪ್ರಮುಖರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ಸೂಪರ್‌ಸ್ಟಾರ್‌ಗಳಾದ ರಜನಿಕಾಂತ್ ಮತ್ತು ಚಿರಂಜೀವಿ ಸಹ ಉಪಸ್ಥಿತರಿದ್ದರು.
ವಿಜಯವಾಡದ ಹೊರವಲಯದ ಕೇಸರಪಲ್ಲಿಯಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಟಿಡಿಪಿ-ಜನಸೇನಾ-ಬಿಜೆಪಿ ಕಾರ್ಯಕರ್ತರ ಅಪಾರ ಜನಸ್ತೋಮ ನೆರೆದಿತ್ತು.