ಮೈಸೂರು: ನಟ ಶಿವರಾಜ್‌ಕುಮಾರ್ ಅವರು ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಪರ ಗುರುವಾರ ಪ್ರಚಾರ ನಡೆಸಿದ ಬಗ್ಗೆ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ನಟ ದುನಿಯಾ ವಿಜಯ್ ಹಾಗೂ ನಟಿ ರಮ್ಯಾ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಶಿವರಾಜ್ ಕುಮಾರ್ ಏಕೆ ಹೀಗೆ ಮಾಡಿದರು ಅಂತ ನನಗೆ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಸಿದ್ದರಾಮಯ್ಯ ಸ್ಟಾರ್‌ಗಳ ಜತೆ ಬಂದು ಸೋಮಣ್ಣ ವಿರುದ್ಧ ಪ್ರಚಾರ ಮಾಡುತ್ತಿದ್ದಾರಲ್ಲಾ ಎಂಬುದೇ ನನಗೆ ಖುಷಿ. ಜನ ಸೇರಿಸಲು ಅವರು ಸ್ಟಾರ್‌ಗಳ ಜತೆ ಬರುತ್ತಿದ್ದಾರೆ ಅಷ್ಟೇ ಎಂದು ಸೋಮಣ್ಣ ಸುದ್ದಿಗಾರರಿಗೆ ಹೇಳಿದರು.
ಒಂದೇ ದಿನ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದ ಅವರು ಈಗ ಪದೇಪದೆ ಬರುತ್ತಿದ್ದಾರೆ. ಡಾ| ರಾಜಕುಮಾರ್ ಕುಟುಂಬಕ್ಕೂ ನನಗೂ 40 ವರ್ಷದ ಅವಿನಾಭಾವ ಸಂಬಂಧವಿದೆ. ಪುನೀತ್ ಹೆಸರಿನಲ್ಲಿ ನಮ್ಮ ಕ್ಷೇತ್ರದಲ್ಲಿ ಬೃಹತ್ ಆಸ್ಪತ್ರೆ ಕಟ್ಟಿಸಿದ್ದೇನೆ ಎಂದು ಸೋಮಣ್ಣ ಹೇಳಿದರು. ಸಿದ್ದರಾಮಯ್ಯ ನಾನು ಎಂಬುದನ್ನು ಮೊದಲು ಬಿಡಲಿ. ವರುಣ ಜನ ನನ್ನನ್ನು ಗೆಲ್ಲಿಸಿದರೆ ನಾನು ವರುಣದಲ್ಲೇ ಇರುತ್ತೇನೆ. ಮನೆಯನ್ನೂ ಮಾಡುತ್ತೇನೆ ಎಂದರು.