Spread the love

ಬೀದರ್ : ಅಂಬೇಡ್ಕರ್, ಸಾವರ್ಕರ್ ಅವರಂಥ ದೇಶದ ಮಹಾ ಪುರುಷರನ್ನು ನಿಂದಿಸಿದ್ದ ಕಾಂಗ್ರೆಸ್ ಈಗ ನನ್ನನ್ನೂ ಹಲವು ಬಾರಿ ನಿಂದಿಸುತ್ತ ಬಂದಿದೆ. ಆದರೆ, ಕಾಂಗ್ರೆಸ್ಸಿಗರ ಎಲ್ಲಾ ಬೈಗಳನ್ನು ನಾನು ಉಡುಗೊರೆಯಾಗಿ ಸ್ವೀಕರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು, ‘ಮೋದಿ ವಿಷದ ಹಾವು’ ಎಂದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವರ ಹುಟ್ಟೂರಿನ ನೆಲದಲ್ಲೇ ಎದುರೇಟು ನೀಡಿದ್ದಾರೆ.

ಹುಮನಾಬಾದ ತಾಲೂಕಿನ ಚಿನಕೇರಾ ಕ್ರಾಸ್ ಬಳಿ ಶನಿವಾರ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಡಾ. ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸಿದೆ ವಾಗ್ದಾಳಿ ನಡೆಸಿದರು. ಸಂವಿಧಾನ ಶಿಲ್ಪಿ ಅಂಬೇಡ್ಕರ ಅವರನ್ನು ಕಾಂಗ್ರೆಸ್ ನಾಯಕರು ರಾಕ್ಷಸ, ರಾಷ್ಟ್ರದ್ರೋಹಿ ಎಂದು ಅಪಮಾನಮಾಡಿದ್ದರು. ವೀರಸಾವರ್ಕರ್ ಅವರನ್ನೂ ಸಹ ಬಿಟ್ಟಿಲ್ಲ. ಈಗ ನನಗೆ ಅವರಂತೆ ಸಮ್ಮಾನ ನೀಡುತ್ತಿದ್ದಾರೆ. ಆದರೆ, ಕಾಂಗ್ರೆಸ್ಸಿಗರು ನನ್ನನ್ನು ಹೀಗೆ ನಿಂದಿಸುತ್ತಾ ಇರಲಿ, ನಾನು ನಿಮ್ಮೆಲ್ಲರ ಸೇವೆಯಲ್ಲಿ ನಿರತನಾಗಿರುತ್ತೇನೆ. ಜನರ ಆಶೀರ್ವಾದಿಂದ ಆ ಎಲ್ಲ ನಿಂದನೆಗಳು ಮಣ್ಣುಪಾಲು ಆಗಲಿವೆ. ಅವರೆಷ್ಟು ಕೆಸರು ಎರಚುತ್ತಾರೋ ಅಷ್ಟು ಕಮಲ ಅರಳಲಿದೆ ಎಂದರು.

ಕಾಂಗ್ರೆಸ್ಸಿಗರು ನನ್ನನ್ನು ಬೈಯಲು ಪಟ್ಟಿಯೇ ಮಾಡಿದ್ದು, ಈವರೆಗೆ ದೊಡ್ಡ ದೊಡ್ಡ ನಾಯಕರು ನನಗೆ 91 ಬಾರಿ ವಿಧ ವಿಧವಾಗಿ ನಿಂದಿಸಿದ್ದಾರೆ. ಬೈಗಳಿಗಾಗಿ ಶಬ್ದಕೋಶದಲ್ಲಿ ತಮ್ಮ ಸಮಯವನ್ನು ಹಾಳು ಮಾಡಿಕೊಳ್ಳುವ ಬದಲು, ಈ ಶ್ರಮವನ್ನು ಉತ್ತಮ ಆಡಳಿತ ಮತ್ತು ತಮ್ಮ ಕಾರ್ಯಕರ್ತರ ಉತ್ಸಾಹವವನ್ನು ಹೆಚ್ಚಿಸಲು ವಿನಿಯೋಗಿಸಿದ್ದರೆ, ಇಂದು ಕಾಂಗ್ರೆಸ್‌ಗೆ ಇಂಥ ದಯನೀಯ ಸ್ಥಿತಿ ಬರುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.

ಬಡವರು ಮತ್ತು ದೇಶಕ್ಕಾಗಿ ಕೆಲಸ ಮಾಡುವಂಥವರಿಗೆ ಅಪಮಾನ ಮಾಡುವುದು ಕಾಂಗ್ರೆಸ್‌ನ ಇತಿಹಾಸ. ನನ್ನೊಬ್ಬನೇ ಮೇಲಷ್ಟೇ ದಾಳಿ ಆಗಿಲ್ಲ. ಈ ಹಿಂದೆ ಮೋದಿ ಚೋರ್, ಚೌಕಿದಾರ್ ಚೋರ ಮತ್ತು ಓಬಿಸಿ ಸಮಾಜದವರು ಚೋರ್ ಎಂದಿದ್ದ ಕಾಂಗ್ರೆಸ್ ಪಕ್ಷ ಈಗ ಲಿಂಗಾಯತರನ್ನು ಭ್ರಷ್ಟರು ಎಂದು ಅವಮಾನಿಸಿದ್ದಾರೆ. ಕರ್ನಾಟಕದಲ್ಲಿ ಈ ಹಿಂದೆ ನಿಂದಿಸಿದಾಗಲೆಲ್ಲ ಮತ್ತೊಮ್ಮೆ ಎದ್ದೇಳಲು ಆಗದಂಥ ಶಿಕ್ಷೆಯನ್ನು ಕನ್ನಡಿಗರು ಕೊಟ್ಟಿದ್ದಾರೆ. ಈಗ ಮತ್ತೆ ಕರ್ನಾಟಕದ ಜನ ಸ್ವಾಭಿಮಾನಕ್ಕೆ ಧಕ್ಕೆ ತರಲಾಗಿದ್ದು, ಮತದಾರರು ಇದಕ್ಕೆ ವೋಟ್‌ಗಳ ಮೂಲಕವೇ ಉತ್ತರ ನೀಡಲಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

Leave a Reply

Your email address will not be published. Required fields are marked *