ಉನ್ನಾವೋ: ಪ್ರಧಾನಿ ನರೇಂದ್ರ ಮೋದಿಯವರ ‘ಮಂಗಳಸೂತ್ರ’ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ಅವರು, ಪುಲ್ವಾಮಾದಲ್ಲಿ ಹುತಾತ್ಮರಾದ ಸೈನಿಕರ ಪತ್ನಿಯರ ಮಂಗಳಸೂತ್ರವನ್ನು ಕಿತ್ತುಕೊಂಡವರು ಯಾರು ಎಂದು ಕೇಸರಿ ಪಕ್ಷ ಉತ್ತರಿಸಬೇಕು ಎಂದು ಬುಧವಾರ ಒತ್ತಾಯಿಸಿದ್ದಾರೆ.
ಇಂದು ಉತ್ತರ ಪ್ರದೇಶದ ಉನ್ನಾವೋದಲ್ಲಿ ಎಸ್‌ಪಿ ಅಭ್ಯರ್ಥಿ ಅಣ್ಣು ಟಂಡನ್ ಪರ ಚುನಾವಣಾ ಪ್ರಚಾರ ನಡೆಸಿದ ಡಿಂಪಲ್ ಯಾದವ್ ಅವರು, “ಮಂಗಳಸೂತ್ರದ ಬಗ್ಗೆ ಮಾತನಾಡುವವರು ಪುಲ್ವಾಮಾ ಘಟನೆಯ ಬಗ್ಗೆಯೂ ಮಾತನಾಡಬೇಕು. ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ ಮತ್ತು ಅವರ ಪತ್ನಿಯರ ಮಂಗಳಸೂತ್ರವನ್ನು ಕಸಿದುಕೊಳ್ಳಲಾಗಿದೆ” ಎಂದರು.
“ಪುಲ್ವಾಮಾ ಘಟನೆಯ ಹಿಂದೆ ಯಾರಿದ್ದಾರೆಂದು ದೇಶದ ಜನರಿಗೆ ಉತ್ತರಿಸಬೇಕು? ಘಟನೆಯ ಬಗ್ಗೆ ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ?” ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರು ಯಾರ ಹೆಸರನ್ನು ಪ್ರಸ್ತಾಪಿಸದೆ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
2019 ರ ಫೆಬ್ರವರಿಯಲ್ಲಿ ಸಾರ್ವತ್ರಿಕ ಚುನಾವಣೆಗೆ ಕೆಲವೇ ದಿನಗಳ ಮುನ್ನ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ 40 ಕ್ಕೂ ಹೆಚ್ಚು ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ಸಿಬ್ಬಂದಿ ಹುತಾತ್ಮರಾಗಿದ್ದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮುಸ್ಲಿಮರಿಗೆ ಮರುಹಂಚಿಕೆ ಮಾಡಲಿದೆ ಮತ್ತು ಅವರು ನಿಮ್ಮ ಮಂಗಳಸೂತ್ರವನ್ನು ಸಹ ಬಿಡುವುದಿಲ್ಲ ಎಂದು ರಾಜಸ್ಥಾನದ ಬನ್ಸ್ವಾರಾದಲ್ಲಿ ಮೋದಿ ಆರೋಪಿಸಿದ್ದರು.
ಎಸ್‌ಪಿ ಮತ್ತು ಕಾಂಗ್ರೆಸ್ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾದ ಭಾಗವಾಗಿದ್ದು, ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡುತ್ತಿವೆ.